ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಯುಎಇ ಕನ್ನಡಿಗರು: ಡಾ.ತಲ್ಲೂರು

KannadaprabhaNewsNetwork |  
Published : Aug 13, 2025, 12:30 AM IST
12ತಲ್ಲೂರ್ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಕಟೀಲಿನ ಸರಸ್ವತಿ ಸದನದಲ್ಲಿ ಯುಎಇ -ಮಧ್ಯಪ್ರಾಚ್ಯದ ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ಇದರ ದಶಮಾನೋತ್ಸವ ಪ್ರಯುಕ್ತ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನಾರ್ಚಣೆ ಕಾರ್ಯಕ್ರಮ ನಡೆಯಿತು.

ಯುಎಇ ಯಕ್ಷಗಾನ ಕೇಂದ್ರದಿಂದ ಯಕ್ಷಗಾನಾರ್ಚನೆ, ಯಕ್ಷದರ್ಪಣ ಬಿಡುಗಡೆ, ಸಾಧಕರಿಗೆ ಗೌರವಾರ್ಪಣೆ

ಕನ್ನಡಪ್ರಭ ವಾರ್ತೆ ಉಡುಪಿ

ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಯುಎಇಯಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಅಲ್ಲಿಯೇ ಯಕ್ಷಗಾನ ಅಭ್ಯಾಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ ಎಂದು ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಶ್ರೀ ಕ್ಷೇತ್ರ ಕಟೀಲಿನ ಸರಸ್ವತಿ ಸದನದಲ್ಲಿ ಯುಎಇ -ಮಧ್ಯಪ್ರಾಚ್ಯದ ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ಇದರ ದಶಮಾನೋತ್ಸವ ಪ್ರಯುಕ್ತ ಕೇಂದ್ರದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ‘ಯಕ್ಷಗಾನಾರ್ಚಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಯಕ್ಷಗಾನಕ್ಕೆ ದೇಶದೇಶಗಳನ್ನು ಒಗ್ಗೂಡಿಸುವ ಶಕ್ತಿಯಿದೆ ಎಂಬುದನ್ನು ಸಂಸ್ಥೆ ಸಾಬೀತು ಪಡಿಸಿದೆ. ದುಬೈಯಲ್ಲಿ ಮಕ್ಕಳು, ಹಿರಿಯರು ಬೇಧವಿಲ್ಲದೆ ಯಕ್ಷಗಾನವನ್ನು ಕಲಿತು ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಇದೊಂದು ಸಾಂಸ್ಕೃತಿಕ ಬೆರಗು ಎಂದ ಅವರು ಮಕ್ಕಳು, ಮಹಿಳೆಯರು ಯಕ್ಷಗಾನ ಕಲಿತರೆ ಕಲೆ ಉಳಿಯುತ್ತದೆ, ಬೆಳೆಯುತ್ತದೆ. ಅದರಲ್ಲೂ ಕಟೀಲು ತಾಯಿಯ ಸನ್ನಿಧಿಯಲ್ಲಿ ಅವರ ಸೇವೆ ಯಕ್ಷಗಾನ ಪ್ರೇಮಿಗಳ ಮನಸೂರೆಗೊಂಡಿದೆ. ಮುಂದೆ ಈ ಸಂಸ್ಥೆ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವದೆತ್ತರಕ್ಕೆ ಬೆಳೆದು ಸಾಗರಾದಾಚೆ ಯಕ್ಷಗಾನದ ಕಂಪನ್ನು ಪಸರಿಸುವಂತಾಗಲಿ ಎಂದು ಹಾರೈಸಿದರು.ಈ ಸಂದರ್ಭ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಹಿಮ್ಮೇಳ ಗುರು ಮುರಳೀಧರ ಭಟ್ ಕಟೀಲು, ನಿವೃತ್ತ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ ಹಾಗೂ ಇತ್ತೀಚಿಗೆ ಅಗಲಿದ ಯುವ ಸ್ತ್ರೀ ವೇಷಧಾರಿ ಆನಂದ ಕಟೀಲು ಅವರಿಗೆ ಮರಣೋತ್ತರವಾಗಿ ಗೌರವಾರ್ಪಣೆ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ತಲಾ 25,000 ರು.ನಗದು ನೀಡಿ ಗೌರವಿಸಲಾಯಿತು. ನಂಚರ ಕೇಂದ್ರ ನಡೆದು ಬಂದ ದಾರಿ ‘ಯಕ್ಷ ದರ್ಪಣ’ ಪುಸ್ತಕ ಬಿಡುಗಡೆ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ಹಾಗೂ ಅನಂತಪದ್ಮನಾಭ ಆಸ್ರಣ್ಣ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಯುಗಪುರುಷದ ಸಂಪಾದಕ ಕೆ.ಭುವನಭಿರಾಮ ಉಡುಪ, ಉದ್ಯಮಿ ವಾಸುದೇವ ಭಟ್, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯಾಯ, ಕೇಂದ್ರದ ಸಂಚಾಲಕ ದಿನೇಶ್ ಟಿ.ಶೆಟ್ಟಿ ಕೊಟ್ಟಿಂಜ ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಕೇಂದ್ರದ ಬಾಲಕಲಾವಿದರಿಂದ ‘ಯಕ್ಷಗಾನ ಪೂರ್ವರಂಗ’ವನ್ನು ಕಟೀಲಿನ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ನಂತರ ಕೇಂದ್ರದ ಕಲಾವಿದರ ಕೂಡುವಿಕೆಯಲ್ಲಿ ‘ಮಣಿಕಂಠ ಮಹಿಮೆ’ ಯಕ್ಷಗಾನ ಪ್ರಸ್ತುತಿಗೊಂಡಿತು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ