ಪಡುಬಿದ್ರಿ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ.11ರಿಂದ 21ರವರೆಗೆ ನಡೆಯಲಿರುವ 5ನೇ ವರ್ಷದ ಉಡುಪಿ - ಉಚ್ಚಿಲ ದಸರಾ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ ವತಿಯಿಂದ ಅ.18 ರಂದು ಪ್ರಥಮ ಬಾರಿ ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ ಅಬ್ಬರದ ಪಿಲಿ ಪಂಥ 2026 ಸೀಸನ್ 1ರ ಪೋಸ್ಟರನ್ನು ದೇವಸ್ಥಾನದ ಪ್ರಾಂಗಣದಲ್ಲಿ ಮಸ್ಕತ್ ಉದ್ಯಮಿ ಯುವರಾಜ್ ಕಿದಿಯೂರು ಬಿಡುಗಡೆಗೊಳಿಸಿದರು.ದಸರ ಉತ್ಸವದ ಮುಖ್ಯ ವೇದಿಕೆಯಲ್ಲಿ ಅ.18 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಅಬ್ಬರದ ಪಿಲಿ ಪಂಥ ಜರಗಲಿದೆ. ಪಿಲಿ ಪಂಥದ ನೇತೃತ್ವ ವಹಿಸಿರುವ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತಿಷ್ಠಿತ ಆಹ್ವಾನಿತ 10 ತಂಡಗಳು ಭಾಗವಹಿಸಲಿದೆ. ಪ್ರಥಮ ಬಹುಮಾನವಾಗಿ 3 ಲಕ್ಷ ರು. ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 2 ಲಕ್ಷ ರು. ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನ 1 ಲಕ್ಷ ರು. ನಗದು ಹಾಗೂ ಆಕರ್ಷಕ ಟ್ರೋಪಿ ಇರಲಿದೆ. ಇದಲ್ಲದೆ, 3 ವೈಯಕ್ತಿಕ ವಿಭಾಗಗಳಲ್ಲಿ ತಲಾ 10 ಸಾವಿರ ರು. ನಗದು ಬಹುಮಾನವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡಕ್ಕೂ 25 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು ಎಂದರು.