ದಾಖಲೆ ಬರೆದ ಉಚ್ಚಿಲ ದಸರಾ ಸಂಪನ್ನ

KannadaprabhaNewsNetwork | Published : Oct 25, 2023 1:15 AM

ಸಾರಾಂಶ

ಕರ್ನಾಟಕದ ಕೋಲ್ಹಾಪುರ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಹೊಸ ದಾಖಲೆಯೊಂದಿಗೆ ಸಂಪನ್ನವಾಯಿತು. 2ನೇ ವರ್ಷದ ಈ ಉಚ್ಚಿಲ ದಸರಾದಲ್ಲಿ ಮಂಗಳವಾರ ನಡೆದ ವಿಜಯದಶಮಿ ಮತ್ತು ಶಾರದಾ ದೇವಿ ವಿಗ್ರಹದ ವಿಸರ್ಜನಾ ಮೆರವಣಿಗೆಯಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕನ್ನಡಪ್ರಭ ವಾರ್ತೆ ಉಚ್ಚಿಲ ಕರ್ನಾಟಕದ ಕೋಲ್ಹಾಪುರ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಹೊಸ ದಾಖಲೆಯೊಂದಿಗೆ ಸಂಪನ್ನವಾಯಿತು. 2ನೇ ವರ್ಷದ ಈ ಉಚ್ಚಿಲ ದಸರಾದಲ್ಲಿ ಮಂಗಳವಾರ ನಡೆದ ವಿಜಯದಶಮಿ ಮತ್ತು ಶಾರದಾ ದೇವಿ ವಿಗ್ರಹದ ವಿಸರ್ಜನಾ ಮೆರವಣಿಗೆಯಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ಮಂಗಳವಾರ ಸಂಜೆ ದೇವಿಯರಿಗೆ ವಿಶೇಷ ಪೂಜೆಯ ನಂತರ, ದೇವಾಲಯದ ಮುಂಭಾಗದಲ್ಲಿ ಭವ್ಯ ವಿಸರ್ಜನಾ ಮೆರವಣಿಗೆಗೆ ಎಂ.ಆರ್.ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಬಂಜಾರ ಪ್ರಕಾಶ್ ಶೆಟ್ಟಿ, ದೇವಳದ ರೂವಾರಿ ನಾಡೋಜ ಜಿ. ಶಂಕರ್, ಕಾಪು ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಅವರು ಶಾರದಾದೇವಿಯ ಅಂಬಾರಿ ಹೊತ್ತ ಆನೆಯ ಸ್ಥಬ್ದಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಚಾಲನೆ ನೀಡಿದರು. ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಮತ್ತು ನವದೇವಿಯರ ವಿಗ್ರಹಗಳನ್ನು ಹೊತ್ತ ಸಾಲಂಕೃತ ವಾಹನಗಳು, 100ಕ್ಕೂ ಹೆಚ್ಚು ವೈವಿಧ್ಯಮಯ ಸ್ತಬ್ಧಚಿತ್ರ, ಮಂಗಳವಾದ್ಯಘೋಷ, ಚಂಡೆ ಬಳಗ, ಕುಣಿತ ಭಜನಾ ತಂಡಗಳೊಂದಿಗೆ ಮೈಲುದ್ಧ ಮೆರವಣಿಗೆಯು ಅತ್ಯಂತ ಶಿಸ್ತು ಮತ್ತು ವ್ಯವಸ್ಥಿತವಾಗಿ ನಡೆಯಿತು. ಉಚ್ಚಿಲದಿಂದ ಎರ್ಮಾಳು, ಪಡುಬಿದ್ರೆ, ಹೆಜಮಾಡಿ ಟೋಲ್ ಗೇಟ್ ಅಲ್ಲಿಂದ ಮತ್ತೆ ಹಿಂದಕ್ಕೆ, ಪಡುಬಿದ್ರೆ, ಎರ್ಮಾಳ್, ಉಚ್ಚಿಲ ಮೂಲಕ, ಮೂಳೂರು ಅಲ್ಲಿಂದ, ಕಾಪು ಬೀಚ್ ಗೆ ತೆರಳಿ ರಾತ್ರಿ ಶಾರದೆ ಮತ್ತು ನವದೇವಿಯರ ವಿಗ್ರಹಗಳ ವಿಸರ್ಜನೆ ನಡೆಯಿತು. ಬಾಕ್ಸ್ ಕಾಶಿಯ ಪುರೋಹಿತರಿಂದ ರಥಾರತಿ ಸೋಮವಾರ ಸಂಜೆ ದೇವಾಲಯದಲ್ಲಿ ಶಾರದೆ ಮತ್ತು ನವದೇವಿಯರಿಗೆ ಅತ್ಯಂತ ವೈಶಿಷ್ಟ್ಯಪೂರ್ಣವಾದ ರಥಾರತಿಯನ್ನು ಆಯೋಜಿಸಲಾಗಿತ್ತು. ಕಾಶಿಯ ಗಂಗಾ ನದಿಯ ತೀರದಲ್ಲಿ ಗಂಗಾರತಿ ನಡೆಸುವ ಪುರೋಹಿತರ ತಂಡವನ್ನೇ ಇಲ್ಲಿಗೆ ಕರಸಲಾಗಿದ್ದು, ಅವರೇ ಇಲ್ಲಿಯೂ ರಥಾರತಿಯನ್ನು ನಡೆಸಿದ್ದು ವಿಶೇಷವಾಗಿತ್ತು. ಹತ್ತಾರು ಸಾವಿರ ಮಂದಿ ಈ ಪೂಜೆಯನ್ನು ಕಣ್ತುಂಬಿಕೊಂಡರು. ಬಾಕ್ಸ್ ಸುವ್ಯವಸ್ಥೆಗೆ ಆದ್ಯತೆ ನೀಡಿದ ದಸರಾ ನಿತ್ಯ ಪೂಜೆ, ಹೋಮಹವನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ಸ್ಪರ್ಧೆಗಳು, ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾಲು ಸರದಿಯಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ಯಾವುದೇ ಗೊಂದಲ, ನೂಕುನುಗ್ಗಲು ಇಲ್ಲದೇ ಅವರೆಲ್ಲರಿಗೂ ಅತ್ಯಂತ ಚೊಕ್ಕವಾದ ಸೇವೆ, ಸೌಲಭ್ಯಗಳನ್ನು ಕಲ್ಪಿಸಿದ್ದು, ಇದಕ್ಕೆ ಆಡಳಿತ ಮಂಡಳಿಯ ವಿಶೇಷ ಆದ್ಯತೆಯನ್ನು ನೀಡಿತ್ತು. ಫೋಟೋ ಃ ಚಾಲನೆ ಫೋಟೋ ಃ ರಥಾರತಿ

Share this article