ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಉಡುಪಿ ಜಿಲ್ಲೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಐದನೇ ವರ್ಷದ ಉಡುಪಿ - ಉಚ್ಚಿಲ ದಸರಾ ಮಹೋತ್ಸವಕ್ಕೆ ಮಂಗಳವಾರ ಅಭೂತಪೂರ್ವ ಶೋಭಾಯಾತ್ರೆ - ಕಾಪು ಕಡಲ ತೀರದಲ್ಲಿ ಶಾರದೆ ಮತ್ತು ನವದುರ್ಗೆಯರ ವಿಸರ್ಜನೆಯೊಂದಿಗೆ ತೆರೆ ಬಿತ್ತು.ಕಳೆದ ಹತ್ತು ದಿನಗಳ ಕಾಲ ನಭೂತೋ ಎಂಬಂತೆ ನಡೆದ ಈ ದಸರಾ ಮಹೋತ್ಸವದ ಶೋಭಾಯಾತ್ರೆಗೆ ದೇವಸ್ಥಾನದ ಸ್ವಾಗತ ಗೋಪುರದ ಮುಂಭಾಗದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಹಾಗೂ ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಮತ್ತು ಶಾಲಿನಿ ಶಂಕರ್, ಇತರ ಗಣ್ಯರೊಂದಿಗೆ ಪುಷ್ಪಾರ್ಚನೆಯ ಮೂಲಕ ಚಾಲನೆ ನೀಡಲಾಯಿತು. ಇದೇ ಸಂದರ್ಭ ಆಕಾಶದಿಂದ ಡ್ರೋನ್ ಮೂಲಕ ಶಾರದೆಯ ವಿಗ್ರಹಕ್ಕೆ ಪುಷ್ಪ ವೃಷ್ಟಿ ಮಾಡಿದ್ದು ಈ ಬಾರಿಯ ಶೋಭಾಯಾತ್ರೆಯ ವಿಶೇಷತೆಯಾಗಿತ್ತು.
ಈ ಸಂದರ್ಭದಲ್ಲಿ ಕಾಶಿಯಿಂದ ಆಗಮಿಸಿರುವ ಅರ್ಚಕರಿಂದ ದಶದೇವಿಯರಿಗೆ ಗಂಗಾರತಿ, 1 ಸಾವಿರಕ್ಕೂ ಅಧಿಕ ಸುಮಂಗಲೆಯಿಂದ ಮಂಗಳಾರತಿಯನ್ನು ಆಯೋಜಿಸಲಾಗಿತ್ತು.
ಕಲಾತಂಡ ಮೆರುಗು: ದೇವಳದ ಬಿರುದಾವಳಿ, ಬಣ್ಣದ ಕೊಡೆಗಳು, ಕೊಂಬು-ಕಹಳೆ, ಡೋಲು, ಮಂಗಳವಾದ್ಯ, ನಾಗಸ್ವರ, ಸ್ಯಾಕ್ಸೋಫೋನ್, ನಾಸಿಕ್ ಬ್ಯಾಂಡ್, ಚೆಂಡೆ, ದೇವರ ಗೊಂಬೆಗಳು, ಕುಣಿತ ಭಜನೆ, ಭಜನಾ ತಂಡಗಳು, ಹುಲಿಕುಣಿತ, ಬೇಡರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಶೋಭಾಯಾತ್ರೆಯ ಆಕರ್ಷಕಗೊಳಿಸಿದವು.ಇದರೊಂದಿಗೆ ಮಹಿಷಮರ್ದಿನಿ, ಶಿವಾಜಿ, ಜಟಾಯು, ರಾವಣ, ಸೀತೆ, ಧನಲಕ್ಷ್ಮೀ ದೇವಿ, ಮಹಿಷಾಸುರ ವಧೆ, ಹನುಮಂತ, ರಾಮ-ಲಕ್ಷ್ಮಣ, ನವದುರ್ಗೆಯರು, ಮಕ್ಕಳ ಶಾರದೆ, ಪರಿಸರ ಜಾಗೃತಿ, ಪೌರಾಣಿಕ ಮತ್ತು ಧಾರ್ಮಿಕ ಟ್ಯಾಬ್ಲೊಗಳು ಶೋಭಾಯಾತ್ರೆಯ ವೈಭವವನ್ನು ಹೆಚ್ಚಿಸಿದವು. ಮಹಾಲಕ್ಷ್ಮೀ ದೇವಸ್ಥಾನ, ಬೆಣ್ಣೆಕುದ್ರು, ಬಗ್ವಾಡಿ, ಉಚ್ಚಿಲ ಮಹಾಲಕ್ಷ್ಮೀ, ಶ್ರೀ ಮಾಧವ ಮಂಗಲ ಪೂಜಾರ್ಯರ ಪ್ರತಿಕೃತಿ, ಬೃಹತ್ ದೋಣಿ ಗಮನ ಸಳೆದವು.
ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಣ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘ ಅಧ್ಯಕ್ಷೆ ಸುಗುಣ ಕರ್ಕೇರ, ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮತ್ತಿತರರಿದ್ದರು.