ಕನ್ನಡಪ್ರಭ ವಾರ್ತೆ ಕಲಾದಗಿ
ಸಮೀಪದ ಉದಗಟ್ಟಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಮಹಾಪುರಾಣ ಮಂಗಲ, ಧರ್ಮ ಸಮಾರಂಭ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಫೆ.೭ರಿಂದ ೧೭ರವರೆಗೆ ಕಲಾದಗಿಯ ಶ್ರೀ ಗುರುಲಿಂಗೇಶ್ವರ ಸಂಸ್ಥಾನ ಪಂಚಗ್ರಹ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿವೆ.ಫೆ.೧೭ರಂದು ಬೆಳಗ್ಗೆ ೬.೩೦ಕ್ಕೆ ಶ್ರಿ ಗುರುಲಿಂಗೇಶ್ವರ ಮತ್ತು ಶ್ರೀ ಪಡದಪ್ಪಯ್ಯ ಶಿವಾಚಾರ್ಯರ ಮಂಗಲ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ಜರುಗುವುದು, ೧೧ ಗಂಟೆಗೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರು ಅಡ್ಡಪಲ್ಲಕ್ಕಿ ಮಹೋತ್ಸವ, ೧೦೮ ಪೂರ್ಣ ಕುಂಭ ಕಳಸ ಸಮೇತ ನೆರವೇರುವುದು, ನಂತರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಸಭೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಕಲಾದಗಿ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಗಿರಿಸಾಗರದ ಕಲ್ಯಾಣ ಮಠದ ಶ್ರಿ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಎಮ್ಮಿಗನೂರು ಹಂಪಿಸಾವಿರದೇವರಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮುತ್ತತ್ತಿಯ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚಳಗೇರಿ ಹಿರೇಮಠದ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಗೆ ಆಗಮಿಸಲಿದ್ದು, ಪ್ರತಿ ದಿನ ಸಂಜೆ ೭ ಗಂಟೆಗೆ, ಜಗದೊಳಗಿನ ಸಕಲ ಜೀವಿಗಳ ಸಂಕಷ್ಟಗಳನ್ನು ಪರಿಹರಿಸುವುದಕ್ಕೋಸ್ಕರ ಅವತರಿಸಿದ ಮಹಾತಪಸ್ವಿ ಶ್ರೀ ಗುರುಲಿಂಗೇಶ್ವರ ಮಹಾಶಿವಯೋಗಿಗಳವರ ಮಹಾಪುರಾಣ ಪ್ರವಚನ ಜರುಗಲಿದೆ, ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮ ಬೇವೂರಿನ ಪ್ರವಚನ ಪ್ರವೀಣ ಎಂ.ಆರ್. ಗುರುಸಿದ್ದೇಶ್ವರ ಶಾಸ್ತ್ರಿಗಳು ಪ್ರವಚನ ಪ್ರಸ್ತುತ ಪಡಿಸುವರು. ಜಿ. ಬಸನಕೊಪ್ಪದ ಶ್ರೀ ಗದಿಗೆಯ್ಯ ಗವಾಯಿಗಳು ಹಿರೇಮಠ ಸಂಗೀತ ಸೇವೆ ನೀಡಲಿದ್ದಾರೆ. ಕೊಡಗಾನುರ ಮಲ್ಲಿಕಾರ್ಜುನ.ನಿ. ಹೂಗಾರ ತಬಲಾ ಸೇವೆ ನೀಡಲಿದ್ದು, ಪ್ರತಿ ದಿನ ಪ್ರವಚನದ ನಂತರ ಮಹಾಪ್ರಸಾದ ವಿನಿಯೋಗ ಇರಲಿದೆ ಎಂದು ಉದಗಟ್ಟಿ ಸಮಸ್ತ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.