ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣ : ಸಂಸದ ಯದುವೀರ್ ತೀವ್ರ ಖಂಡನೆ

KannadaprabhaNewsNetwork | Updated : Feb 16 2025, 01:01 PM IST

ಸಾರಾಂಶ

ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರವಾಗಿ ಖಂಡಿಸಿದರು.

  ಮೈಸೂರು : ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರವಾಗಿ ಖಂಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಇಂತಹ ಕೃತ್ಯಗಳು ನಡೆಯುತ್ತವೆ. ಕಿಡಿಗೇಡಿಗಳು ನಮಗೆ ರಕ್ಷಣೆ ನೀಡುವ ಪೊಲೀಸರ ಮೇಲೇ ದಾಳಿ ಮಾಡಿದ್ದು ಸರಿಯಲ್ಲ. ಪೊಲೀಸರ ಮೇಲೆ ಗೌರವ, ಮರ್ಯಾದೆ ಇರಬೇಕು ಎಂದರು.

ಈ ಹಿಂದೆ ಸಹ ನಾಗಮಂಗಲ, ಮಂಡ್ಯ, ಬೆಂಗಳೂರಿನಲ್ಲಿ ಇಂತಹ ಕೃತ್ಯಗಳು ನಡೆದಿವೆ. ಈ ಬಗ್ಗೆ ಸಮಗ್ರವಾದ ತನಿಖೆಯಾಗಿ ವರದಿ ನೀಡಬೇಕು. ಯಾವ ಕಾರಣಕ್ಕೆ, ಯಾರಿಂದ ಆಗಿದೆ ಎಂಬುದು ಗೊತ್ತಾಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಘಟನೆಯಲ್ಲಿ ಆರ್ ಎಸ್ಎಸ್ ಕೈವಾಡ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಸಾಕ್ಷ್ಯಗಳನ್ನು ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.

ಸೈಬರ್ ಕ್ರೈಂ ಕರೆ ಬರುತ್ತಿವೆ:

ಸೈಬರ್ ತಂತ್ರಜ್ಞಾನದಿಂದ ಉಪಯೋಗಕ್ಕಿಂತ ದುರುಪಯೋಗವೇ ಆಗುತ್ತಿದೆ. ನಮಗೂ ಸಾಕಷ್ಟು ಸ್ಕ್ಯಾಮ್ ಕರೆಗಳು, ಒಟಿಪಿ ‌ಕೊಡಿ ಅಂತ ಕರೆಗಳು ಬರುತ್ತಲೇ ಇರುತ್ತವೆ. ನಾನು ಈವರೆಗೆ ಸೈಬರ್ ಕ್ರೈಂ ಜಾಲಕ್ಕೆ ಬಲಿಯಾಗಿಲ್ಲ. ನನಗೆ ಅದರ ಬಗ್ಗೆ ಜಾಗೃತಿ ಇರುವುದರಿಂದ ಅದರ ಬಲೆಗೆ ಬಿದ್ದಿಲ್ಲ. ಎಷ್ಟೇ ಹೇಳಿದರೂ ಸೈಬರ್ ಕ್ರಿಮಿನಲ್‌ ಗಳು ತಂತ್ರಜ್ಞಾನದ ಮೂಲಕ ಅಪರಾಧ ಮಾಡುತ್ತಿದ್ದಾರೆ. ಸೈಬರ್ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿ ಜೊತೆ ಸೇರಿ ನಾವು ಸರ್ಕಾರ ಜಾಗೃತಿ ಮಾಡುತ್ತಿದ್ದೇವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಬೆಂಗಳೂರು ಅರಮನೆ ಭೂವಿವಾದ ಸಂಬಂಧ ರಾಜವಂಶಸ್ಥರಿಗೆ ಟಿಡಿಆರ್ ನೀಡಲು ಸುಪ್ರಿಂ‌ಕೋರ್ಟ್ 2 ವಾರ ಗಡುವು ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿತ್ತು. ಇದೀಗ ಸುಪ್ರೀಂ‌ಕೊರ್ಟ್ ರಾಜ್ಯ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದೆ. ರಾಜ್ಯ ಸರ್ಕಾರ ಏನು ತೀರ್ಮಾನ ಮಾಡಲಿದೆ ಎಂದು ಕಾದು ನೋಡುತ್ತೇವೆ.

- ಯದುವೀರ್ ಕೃ಼ಷ್ಣದತ್ತ ಚಾಮರಾಜ ಒಡೆಯರ್, ಸಂಸದರು

ಆರೋಪಿ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

 ಮೈಸೂರು : ನಗರದ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟಕ್ಕೆ ಕಾರಣವಾದ ವಿವಾದಿತ ಪೋಸ್ಟ್ ಮಾಡಿದ್ದ ಆರೋಪಿ ಸತೀಶ್ ಅ. ಪಾಂಡುರಂಗ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಫೆ.17ಕ್ಕೆ ಮುಂದೂಡಿದೆ.

ಸರ್ಕಾರಿ ಅಭಿಯೋಜಕಿ ಸವಿತಾ ಅವರು, ಸಮಾಜದಲ್ಲಿ ಶಾಂತಿ ಭಂಗ ಉಂಟಾಗುವ ಆತಂಕದ ಹಿನ್ನೆಲೆಯಲ್ಲಿ ವಾದ ಮಂಡಿಸಿ, ಮತ್ತಷ್ಟು ವಾದ ಮಂಡನೆಗೆ ಕಾಲಾವಾಕಾಶ ಕೇಳಿದರು. ಈ ಹಿನ್ನೆಲೆಯನ್ನು ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ನ್ಯಾಯಾಲಯವು ಮುಂದೂಡಿದೆ.

ಇದೇ ವೇಳೆ ಆರೋಪಿ ಸತೀಶ್ ಪರ ವಕೀಲ ಹ.ಮಾ. ಭಾಸ್ಕರ್ ಅವರು, ಬಂಧನ ಸಂಬಂಧ ಕೋರ್ಟ್‌ ಗೆ ಪೊಲೀಸರು ಸರಿಯಾದ ಸಾಕ್ಷಿ ಸಲ್ಲಿಸಿಲ್ಲ. ಯಾವ ಕಾರಣದಿಂದ ಒಂದು ಧರ್ಮದ ಜನರ ಭಾವನೆಗೆ ಧಕ್ಕೆ ಆಗುತ್ತದೆ ಎಂಬುದನ್ನು ತಿಳಿಸಿಲ್ಲ. ಪೊಲೀಸರು ಈಗಾಗಲೇ ಆರೋಪಿಯ ವಿಚಾರಣೆ ಮಾಡಿ ಮುಗಿಸಿದ್ದಾರೆ. ಪೋಸ್ಟ್ ಹಾಕಲಾಗಿದೆ ಎನ್ನಲಾದ ಮೊಬೈಲ್ ಕೂಡ ಸೀಜ್ ಮಾಡಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ವಾದ ಮಂಡಿಸಿದರು.

ವಾದ ಪ್ರತಿವಾದ ಆಲಿಸಿದ ಬಳಿಕ ವಿಚಾರಣೆ ಫೆ.17ಕ್ಕೆ ಮುಂದೂಡಿದ‌ 2ನೇ ಹೆಚ್ಚುವರಿ ಸಿವಿಲ್ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಸರೋಜಾ ಅವರು, ಉರ್ದು ಭಾಷೆಯ ಪದಗಳ ಕನ್ನಡ ಭಾಷಾಂತರ ಮಾಡುವಂತೆ ಸೂಚಿಸಿದ್ದಾರೆ.

ಸತೀಶ್ ಅಂಗಡಿ ಸಿಬ್ಬಂದಿಯಿಂದ ದುಷ್ಕೃತ್ಯ ಶಂಕೆ

ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟರ್ ಹಾಕಿದ ಪ್ರಕರಣ ಸಂಬಂಧ ಬಂಧಿತ ಕಲ್ಯಾಣಗಿರಿಯ ನಿವಾಸಿ ಸತೀಶ್ ಅ. ಪಾಂಡುರಂಗ ಡ್ರೈ ಪ್ರೂಟ್ಸ್ ಮಾರಾಟದ ಅಂಗಡಿ ನೌಕರರೇ, ಸತೀಶ್ ಅವರ ಗಮನಕ್ಕೆ ಬಾರದೇ ಪೋಸ್ಟರ್ ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸತೀಶ್ ಅಂಗಡಿ ಮತ್ತು ಪ್ಯಾಕಿಂಗ್ ಯೂನಿಟ್‌ ನಲ್ಲಿ ಯಲ್ಲಿ 300 ಹೆಚ್ಚು ನೌಕರರಿದ್ದು, ವ್ಯವಹಾರಿಕವಾಗಿ ಕೆಲವರು ಸತೀಶ್ ಮೊಬೈಲ್ ಅನ್ನು ಸಹ ಬಳಸುತ್ತಿದ್ದರು. ಇದೇ ಅವಕಾಶವನ್ನು ಬಳಸಿಕೊಂಡು ಬೇರೆ ಎಲ್ಲಿಂದಲ್ಲೋ ಬಂದ ಅಥವಾ ಸಿದ್ಧಪಡಿಸಿದ ಅವಹೇಳನಕಾರಿ ಪೋಸ್ಟರ್ ಅನ್ನು ವಾಟ್ಸಾಪ್ ಸ್ಟೇಟಸ್‌ ಗೆ ಹಾಕಿರಬಹುದು ಎಂದು ಶಂಕಿಸಿರುವ ಪೊಲೀಸರು, ಡ್ರೈ ಪ್ರೂಟ್ಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಕೆಲವು ಶಂಕಿತರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಅವಹೇಳನಕಾರಿ ಪೋಸ್ಟರ್ ಮೂಲ ಹುಡುಕವ ಕೆಲಸದಲ್ಲಿ ನಿರತರಾಗಿದ್ದಾರೆ.

Share this article