ತಾಲ್ಲೂಕಿನ ಚಿಕ್ಕ ಕೊಳತ್ತೂರು ಗ್ರಾಮದ ಶ್ರೀ ಉದ್ಭವ ಬಾವಿ ಬಸವಣ್ಣ ಪೂಜಾ ಕಾರ್ಯಕ್ರಮ ಸೋಮವಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲ್ಲೂಕಿನ ಚಿಕ್ಕ ಕೊಳತ್ತೂರು ಗ್ರಾಮದ ಶ್ರೀ ಉದ್ಭವ ಬಾವಿ ಬಸವಣ್ಣ ಪೂಜಾ ಕಾರ್ಯಕ್ರಮ ಸೋಮವಾರ ನೇರವೇರಿತು. ಅರ್ಚಕ ದಯಾಕರ್ ನೇತೃತ್ವದಲ್ಲಿ ಬೆಳಗ್ಗಿನಿಂದ ಪೂಜಾ ಕಾರ್ಯಗಳು ನಡೆದವು. ಪೂಜೆಗಾಗಿ ಗ್ರಾಮದ ಪ್ರತಿ ಮನೆಗಳಿಂದ ಅಕ್ಕಿ ಬೆಲ್ಲ ತರಕಾರಿ ತೆಂಗಿನಕಾಯಿಯನ್ನು ಪ್ರಸಾದ ತಯಾರಿಕೆಗೆ ನೀಡಲಾಗುತ್ತದೆ. ಹರಕೆ ಹೊತ್ತು ಈಡೇರಿದವರು ತೆಂಗಿನಕಾಯಿಯನ್ನು ಹೊಡೆಯುವುದು ಇಲ್ಲಿಯ ವಿಶೇಷ. ಈ ಗ್ರಾಮದಿಂದ ಮದುವೆಯಾಗಿ ಹೊರ ಹೊರ ಊರುಗಳಿಗೆ ಹೋದ ಹೆಣ್ಣುಮಕ್ಕಳು ಪೂಜಾ ದಿನದಂದು ತಪ್ಪದೆ ತವರಿಗೆ ಆಗಮಿಸಿ ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ವಿಶೇಷ ಎಂದರೆ ದೇವಾಲಯದ ಕಲ್ಯಾಣಿಯಲ್ಲಿ ಬಿರು ಬೇಸಿಗೆಯಲ್ಲೂ ವರ್ಷಂಪೂರ್ತಿ ನೀರು ತುಂಬಿರುತ್ತದೆ. ಇಲ್ಲಿ ಉದ್ಭವ ಬಸವಣ್ಣನ ಮೂರ್ತಿಯಿಂದ ಹರಿದುಬರುವ ಜಲ ಕಲ್ಯಾಣಿ ಸೇರುತ್ತದೆ ಮತ್ತು ಅಲ್ಲಿಂದ ಮುಂದೆ ಚಿಕ್ಕದಾದ ಕೊಳ ಸೇರುತ್ತದೆ. ಎಷ್ಟೇ ಬರಗಾಲ ಬಂದರೂ ಈ ಕಲ್ಯಾಣಿ, ಕೊಳ ಬತ್ತುವುದಿಲ್ಲ. ಅಂತೆಯೇ ಎಷ್ಟೇ ಪ್ರವಾಹ ಬಂದರೂ ಈ ಕಲ್ಯಾಣಿ ಮತ್ತು ಕೊಳಗಳು ತುಂಬಿ ಹರಿಯುವುದಿಲ. ಯಾವಾಗಲೂ ಒಂದೇ ರೀತಿಯಲ್ಲಿ ಒಂದೇ ಸಮನಾದ ನೀರು ಇಲ್ಲಿ ಕಂಡು ಬರುತ್ತದೆ. ಗ್ರಾಮ ವ್ಯಾಪ್ತಿಯ ಜಾನುವಾರುಗಳನ್ನು ಈ ಬಾವಿ ಬಸವಣ್ಣ ರಕ್ಷಿಸುತ್ತಾನೆ ಎಂಬ ಪ್ರತೀತಿ ಈ ಭಾಗದ ಜನರಲ್ಲಿದೆ. ಪೂಜೆ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಸಿ.ಎಂ. ಪುಟ್ಟಪ್ಪ, ಪ್ರಮುಖರಾದ ಕೊಮಾರಪ್ಪ, ಸಿ.ಜೆ. ಗಿರೀಶ್, ಸಿ.ಕೆ. ಸುಬ್ಬಯ್ಯ, ಬೆಳ್ಳಿಯಪ್ಪ, ಸುನಿಲ್, ದಿನೇಶ್, ವಿನೋದ್, ಪುರುಷೋತ್ತಮ, ಸುರೇಶ್, ಭಾನುಪ್ರಕಾಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.