ಉಡುಪಿ: ಕೃಷ್ಣಮಠದಲ್ಲಿ 252ನೇ ಪರ್ಯಾಯ ಆರಂಭ

KannadaprabhaNewsNetwork |  
Published : Jan 19, 2024, 01:45 AM IST
ಪರ್ಯಾಯ ಫೋಟೋಸ್ | Kannada Prabha

ಸಾರಾಂಶ

ಮುಂಜಾನೆ ಸುಮಾರು 6 ಗಂಟೆಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬಂದು ಪುತ್ತಿಗೆ ಶ್ರೀಗಳನ್ನು ಸರ್ವಜ್ಞ ಪೀಠಾರೋಹಣ ಮಾಡಿಸಿ, ಅಕ್ಷಯಪಾತ್ರಗಳನ್ನು ಹಸ್ತಾಂತರಿಸಿದರು. ಇದು ಕೂಡ ಮಠದ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಕೃಷ್ಣಮಠದಲ್ಲಿ ಗುರುವಾರ ಮುಂಜಾನೆ ಪುತ್ತಿಗೆ ಮಠದ 29ನೇ ಯತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನ ಮಹಾಪೂಜೆ ನಡೆಸುವ ಮೂಲಕ ತಮ್ಮ 4ನೇ ಪರ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸಿದರು. ಇದು ಕೃಷ್ಣಮಠದ ಇತಿಹಾಸದಲ್ಲಿ 252ನೇ ಪರ್ಯಾಯವಾಗಿ ದಾಖಲಾಯಿತು.

ಪುತ್ತಿಗೆ ಶ್ರೀಪಾದರು ಯತಿಗಳಿಗೆ ನಿಷಿದ್ಧವಾದ ಸಾಗರೋಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಇತರ ಮಠಾಧೀಶರು ಈ ಪರ್ಯಾಯೋತ್ಸವಕ್ಕೆ ಗೈರುಹಾಜರಾಗಿದ್ದರು. ಆದರೆ, ಮುಂಜಾನೆ ಸುಮಾರು 6 ಗಂಟೆಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬಂದು ಪುತ್ತಿಗೆ ಶ್ರೀಗಳನ್ನು ಸರ್ವಜ್ಞ ಪೀಠಾರೋಹಣ ಮಾಡಿಸಿ, ಅಕ್ಷಯಪಾತ್ರಗಳನ್ನು ಹಸ್ತಾಂತರಿಸಿದರು. ಇದು ಕೂಡ ಮಠದ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಇದಕ್ಕೆ ಮೊದಲು ಪುತ್ತಿಗೆ ಶ್ರೀಪಾದರು ಮಧ್ಯರಾತ್ರಿ ಸುಮಾರು 1 ಗಂಟೆಗೆ ತಮ್ಮ ಪಟ್ಟಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ದಂಡತೀರ್ಥ ಎಂಬಲ್ಲಿ ತೆರಳಿ ಅಲ್ಲಿನ ತೀರ್ಥಕೆರೆಯಲ್ಲಿ ಪವಿತ್ರ ಸ್ನಾನ, ಸಂಸ್ಥಾನ ಪೂಜೆ, ಜಪತಪಗಳನ್ನು ನಡೆಸಿದರು.

ಅಲ್ಲಿಂದ 3.30ಕ್ಕೆ ಉಡುಪಿ ನಗರದ ಹೊರಭಾಗದ ಜೋಡುಕಟ್ಟೆಗೆ ಬಂದರು. ಅಲ್ಲಿ ಮತ್ತೆ ತಮ್ಮ ಆರಾಧ್ಯ ದೇವರಿಗೆ ಪೂಜೆ ನಡೆಸಿದರು. ಅಲ್ಲಿ ಕುಳಿತು ಮೆರವಣಿಗೆಯ ಹತ್ತಾರು ಸ್ತಬ್ಧಚಿತ್ರ, ಸಾಂಸ್ಕೃತಿಕ ತಂಡಗಳನ್ನು ವೀಕ್ಷಿಸಿ, ನಂತರ 4 ಗಂಟೆಗೆ ತಮ್ಮ ಆರಾಧ್ಯಮೂರ್ತಿ ಪಾಂಡುರಂಗ ವಿಠಲನನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮುಂದಿರಿಸಿಕೊಂಡು ಭಾರಿ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿದರು.

ರಥಬೀದಿಯಲ್ಲಿ ಹಾಸಿದ್ದ ಬಿಳಿ ನಡೆಮಡಿಯ ಮೇಲೆ ನಡೆದುಕೊಂಡು ಬಂದು ಕನಕನ ಕಿಂಡಿಯಲ್ಲಿ ಕೃಷ್ಣದರ್ಶನ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಾಲಯಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಅಲ್ಲಿಂದ ನೇರವಾಗಿ ಕೃಷ್ಣಮಠ ಪ್ರವೇಶಿಸಿ, ನವದ್ವಾರ ಕಿಂಡಿಯಿಂದ ಮತ್ತೊಮ್ಮೆ ಕೃಷ್ಣನನ್ನು ವೀಕ್ಷಿಸಿದರು. ನಂತರ ಸರ್ವಜ್ಞ ಪೀಠವಿರುವ ಕೋಣೆಯಲ್ಲಿ ಅದಮಾರು ಶ್ರೀಗಳಿಂದ ಅಕ್ಷಯರಾತ್ರೆ, ಬೀಗದ ಕೈಯನ್ನು ಸ್ವೀಕರಿಸಿ, ಸರ್ವಜ್ಞ ಪೀಠವನ್ನು ಅಲಂಕರಿಸಿದರು.

ಅಲ್ಲಿಂದ ಉಭಯ ಶ್ರೀಗಳು ಬಡಗುಮಾಳಿಗೆಗೆ ಆಗಮಿಸಿ, ಅಲ್ಲಿ ಅರಳಿನಿಂದ ಮಾಡಿದ ಗದ್ದಿಗೆ ಮೇಲೆ ಆಸೀನರಾಗಿ, ಪರಸ್ಪರ ತೈಲಗಂಧಾದ್ಯುಪಚಾರ ನಡಸಿದರು, ಪುರೋಹಿತರಿಂದ ಮಾಲಿಕಾ ಮಂಗಳಾರತಿ ನಡೆಯಿತು.

ಇವಿಷ್ಟು ಕೃಷ್ಣಮಠದೊಳಗೆ ನಡೆಯುವ ಸಾಂಪ್ರದಾಯಿಕ ಪರ್ಯಾಯೋತ್ಸವದ ಪ್ರಕ್ರಿಯೆಗಳಾದರೆ, ವಾದ್ಯಘೋಷ, ವಂದಿಮಾಗಧರ ಬಹುಪರಾಕ್ ಗಳು ನಡುವೆ ರಾಜಾಂಗಣಕ್ಕೆ ಆಗಮಿಸಿ ಸಾವಿರಾರು ಮಂದಿ ಕೃಷ್ಣಭಕ್ತರು, ಮಂತ್ರಿಗಳು, ಸರ್ಕಾರದ ಅಧಿಕಾರಿದ ಸಮ್ಮುಖದಲ್ಲಿ ಮುಂಜಾನೆಯ ಪರ್ಯಾಯ ದರ್ಬಾರ್ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ