ಉಡುಪಿ: ಕಾರ್ಮಿಕರಿಗೆ ವೈದ್ಯಕೀಯ ನೆರವಿನ ಇ.ಎಸ್.ಐ ಯೋಜನೆ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ವಿಳಂಬ ನೀತಿ ಖಂಡಿಸಿ, ಉಡುಪಿ ಜಿಲ್ಲಾ ಬಿಜೆಪಿಯ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಇ.ಎಸ್.ಐ ಸೌಲಭ್ಯಗಳನ್ನು ಸಮರ್ಪಕಗೊಳಿಸಲು ಆಗ್ರಹಿಸಲಾಯಿತು.ಕಾರ್ಮಿಕ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಜಿಲ್ಲೆಯಲ್ಲಿ ಇ.ಎಸ್.ಐ ಯೋಜನೆಯಡಿ ಖಾಸಗಿ ಆಸ್ಪತ್ರೆಗಳ ಜೊತೆ ಸಕಾಲದಲ್ಲಿ ಒಪ್ಪಂದ ಮತ್ತು ನೊಂದಾವಣೆ ಮಾಡಿಕೊಳ್ಳದೇ ಇರುವುದರಿಂದ ಕಾರ್ಮಿಕರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರ ಮೂಲಕ ಒತ್ತಡ ತಂದ ಹಿನ್ನೆಲೆಯಲ್ಲಿ ಪ್ರಸ್ತುತ ನ. ೧೫ ರ ವರೆಗೆ ಮಾತ್ರ ಸೌಲಭ್ಯ ವಿಸ್ತರಿಸಲಾಗಿದೆ. ನ. ೧೫ರ ನಂತರ ಮತ್ತೆ ನೊಂದಾವಣೆ ಸೌಲಭ್ಯ ಪಡೆಯಲು ರೋಗಿಗಳು ಪರದಾಡಬೇಕಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕಾರ್ಮಿಕ ಸಚಿವರಿಗೆ ಸೂಕ್ತ ನಿರ್ದೇಶನ ನೀಡಿ ಬಡ ಕಾರ್ಮಿಕರಿಗೆ ತೊಂದರೆ ನೀಡುವುದನ್ನು ನಿಲ್ಲಿಸಿ ಇ.ಎಸ್.ಐ ಸೌಲಭ್ಯವನ್ನು ೩ ರಿಂದ ೫ ವರ್ಷಗಳ ವರೆಗೆ ವಿಸ್ತರಿಸಲು ಬಿಜೆಪಿ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಸರ್ಕಾರವನ್ನು ಮನವಿ ಮೂಲಕ ಒತ್ತಾಯಿಸಿದೆ.ಪಕ್ಷದ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಅರುಣ್ ಕುಮಾರ್ ಬಾಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ, ಅಲೆವೂರು ಶ್ರೀಕಾಂತ್ ನಾಯಕ್, ಪ್ರಮುಖರಾದ ಜ್ಯೋತಿ ಉದಯ್ ಕುಮಾರ್, ಸಂತೋಷ್ ಪೂಜಾರಿ ನೇರಳಕಟ್ಟೆ, ನಳಿನಿ ಪ್ರದೀಪ್, ಸಂಧ್ಯಾ ರಮೇಶ್, ಕಿರಣ್ ಪೂಜಾರಿ ತೆಕ್ಕಟ್ಟೆ, ಸಂತೋಷ್ ಶೆಟ್ಟಿ ಕುಂದಾಪುರ, ಶೈಲೇಂದ್ರ ಮಣಿಪಾಲ್, ಸುಧೀರ್ ಕೆ.ಎಸ್., ಸತೀಶ್ ಪೂಜಾರಿ ವಕ್ವಾಡಿ, ಸುರೇಂದ್ರ ಕಾಂಚನ್, ಲೀಲಾ ಪೂಜಾರಿ ಮುಂತಾದ ಮುಖಂಡರು ಹಾಜರಿದ್ದರು.