ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಜಯವಿಭವ ಸ್ವಾಮಿ ಈ ಸೇವಾ ಸೌಲಭ್ಯಕ್ಕೆ ಚಾಲನೆ ನೀಡಿ, ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂತಹ ಹೈಟೆಕ್ ಲೈಬ್ರೆರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಫಂಡ್‌ನಲ್ಲಿ 35 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಲೈಬ್ರೆರಿ ನಿರ್ಮಾಣವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಅಧ್ಯಯನ ನಡೆಸಲು ಅಧುನಿಕ ಪುಸ್ತಕಗಳ ಜೊತೆಗೆ ಹವಾನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇದು ಒಂದು ತಿಂಗಳೊಳಗೆ ಕಾರ್ಯಗತಗೊಳ್ಳಲಿದೆ ಎಂದರು.
ಉಡುಪಿ, ಮಂಗಳೂರು, ಕರಾವಳಿ ಹಾಗೂ ಗುಲ್ಬರ್ಗ, ರಾಯಚೂರು, ಕೋಲಾರ ಮೊದಲಾದ ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಕೂತುಕೊಂಡು ಓದಬೇಕು ಎನ್ನುವ ವಾತಾವರಣ ಕಲ್ಪಿಸಲಾಗುವುದು. ಉತ್ತಮ ಖುರ್ಚಿ, ಟೇಬಲ್ ಜೊತೆಗೆ ಸಾಧ್ಯವಾದರೆ ಎಸಿ ವ್ಯವಸ್ಥೆ ಅಳವಡಿಸಲು ಸೂಚಿಸಿದ್ದೇನೆ. ಸ್ಥಳೀಯಾಡಳಿತ ನೀಡುವ ಸೆಸ್ ಸಂಗ್ರಹಣೆಯಲ್ಲಿ ಶೇ. 60ರಷ್ಟು ಪುಸ್ತಕ ಖರೀದಿ ಮಾಡಬೇಕಾಗಿದೆ. ಇದರಲ್ಲಿ ಶೇ. 20 ರಷ್ಟು ಮೊತ್ತವನ್ನು ಓದುಗರು ಇಷ್ಟಪಟ್ಟ ಪುಸ್ತಕಗಳನ್ನು ತರಿಸಿಕೊಡಲು ಅವಕಾಶವಿದೆ ಎಂದರು.ಪ್ರಸ್ತುತ ಉಡುಪಿ ನಗರ ಕೇಂದ್ರ ಗ್ರಂಥಾಲಯ ಅತ್ಯುತ್ತಮ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ಓದುಗರಿಗೆ ತೆರೆದಿದೆ. ಉತ್ತಮ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ಆದ್ದರಿಂದ ಉಡುಪಿಯ ಓದುಗರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಸ್ಥಳೀಯಾಡಳಿತ ಸಂಸ್ಥೆಗಳು ಗ್ರಂಥಾಲಯಗಳನ್ನು ತೆರೆಯಲು ಅಗತ್ಯವಾದ ಜಾಗ, ಕಟ್ಟಡ ನೀಡಿದರೆ ಜಿಲ್ಲೆಯ ಓದುಗರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಕೆಎಎಸ್, ಐಎಎಸ್ ನಂತಹ ಸೇವಾಕ್ಷೇತ್ರಗಳಿಗೆ ಕಾಲಿರಿಸಬೇಕು. ಇದಕ್ಕಾಗಿ ಬೇಕಾದ ಎಲ್ಲಾ ಪುಸ್ತಕಗಳನ್ನು ಇಲಾಖೆ ಒದಗಿಸಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಗ್ರಂಥಾಲಯದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಇದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಡುಪಿ ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಹಾಜರಿದ್ದರು. ಗ್ರಂಥ ಪಾಲಕಿ ರಂಜಿತಾ ಸಿ. ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ವಂದಿಸಿದರು.