ಉಡುಪಿ: ಸಮಾಜ ಸುಸೂತ್ರವಾಗಿ ನಡೆಯಬೇಕಾದರೇ ದೈವಾನುಗ್ರಹ ಬೇಕು. ಅಂತಹ ದೈವಾನುಗ್ರಹವನ್ನು ಭಗವಾನ್ ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುವುದಕ್ಕಾಗಿಯೇ ನಮ್ಮ ಹಿರಿಯರು, ಪ್ರಾಜ್ಞರು ಪರ್ಯಾಯವೆಂಬ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶಿರೂರು ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಎಲ್ಲ ಬಗೆಯ ಹೂವುಗಳು ಸೇರಿ ಚೆಂದದ ಮಾಲೆಯಾಗುವಂತೆ, ಎಲ್ಲರೂ ಸೇರಿ ಶಿರೂರು ಪರ್ಯಾಯವನ್ನು ಚಂದಗಾಣಿಸೋಣ ಎಂದರು.ವಿದ್ವಾನ್ ಸತ್ಯನಾರಾಯಣ ಆಚಾರ್ಯರು ಶಿರೂರು ಶ್ರೀಗಳ ಅಭಿನಂದನಾ ಭಾಷಣ ಮಾಡಿದರು. ನಂತರ ನಾಗರಿಕರ ಪರವಾಗಿ ಭಾವಿ ಪರ್ಯಾಯ ಶ್ರೀಗಳನ್ನು ವಿದ್ಯುಕ್ತವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪರ್ಯಾಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯಶ್‌ಪಾಲ್ ಸುವರ್ಣ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ ಉಪಸ್ಥಿತರಿದ್ದರು, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು, ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ನಿಸ್ವಾರ್ಥ ಪ್ರಾರ್ಥನೆಗೆ ಒಲಿಯುವ ಕೃಷ್ಣ: ಶೀರೂರು ಶ್ರೀ
ಪೌರಸನ್ಮಾನ ಸ್ವೀಕರಿಸಿ ಸಂದೇಶ ನೀಡಿದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ನಿಸ್ವಾರ್ಥದಿಂದ ಪ್ರಾರ್ಥಿಸುವ ಭಕ್ತರನ್ನು ಕೃಷ್ಣ ಎಂದೂ ಕೈಬಿಡುವುದಿಲ್ಲ, ಅಂತಹ ಕೃಷ್ಣನ ಸೇವೆಯ ಮೂಲಕ ಆತನ ಕೃಪೆಗೆ ಪಾತ್ರರಾಗುವುದಕ್ಕೆ, ತಮ್ಮ ಪರ್ಯಾಯದ ಸಂದರ್ಭದಲ್ಲಿ ಸಮಾಜದ ಎಲ್ಲಾ ಭಕ್ತರಿಗೆ ಅವಕಾಶ ಇದೆ ಎಂದರು. ಇದು ತಮಗೆ ಮೊದಲ ಪರ್ಯಾಯ, ಆದರೇ ಉಡುಪಿ ಜನತೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಪರ್ಯಾಯ, ಆದ್ದರಿಂದ ಉಡುಪಿ ಜನತೆಗೆ ಪರ್ಯಾಯದ ಅನುಭವ ಹೆಚ್ಚಿದೆ. ಆದ್ದರಿಂದ ಉಡುಪಿಯ ಜನತೆ ತಮ್ಮ ಪರ್ಯಾಯೋತ್ಸವವನ್ನು ಆಸಕ್ತಿ ವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.