ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಜನತಾದಳ ಜಾತ್ಯತೀತ ಪಕ್ಷ ವತಿಯಿಂದ ಉಡುಪಿ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬವನ್ನು ಅವರ ಆಶಯದಂತೆ ಸರಳ ರೀತಿಯಲ್ಲಿ ಆಚರಿಸಲಾಯಿತು.ದೇವೇಗೌಡರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಜಿಲ್ಲಾಧ್ಯಕ್ಷ ಯೋಗಿಶ್ ವಿ. ಶೆಟ್ಟಿ, ದೇವೇಗೌಡರಿಗೆ ಒಳ್ಳೆಯ ಆರೋಗ್ಯ, ಆಯುಷ್ಯವನ್ನು ಭಗವಂತ ಕರುಣಿಸಲಿ ಎಂದು ಹಾರೈಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಕಾರ್ಯಕರ್ತರ ಮೂಲಕ ದೇವೇಗೌಡರ ಭಾವಚಿತ್ರಕ್ಕೆ ಮಸಿಯನ್ನು ಬಳಿದಿದ್ದಾರೆ. ಮಾಜಿ ಪ್ರಧಾನಿ ಆದಂತಹ ದೇವೇಗೌಡರು ನಮ್ಮ ರಾಜ್ಯಕ್ಕೆ, ದೇಶಕ್ಕೆ ಯಾವ ಕೊಡುಗೆಯನ್ನು ಕೊಟ್ಟಿದ್ದಾರೆ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಅದಕ್ಕಾಗಿ ನಾವಿವತ್ತು ಅವರ ಹುಟ್ಟುಹಬ್ಬವನ್ನು ಆಚರಿಸಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡಿದ್ದೇವೆ. ವಿರೋಧಿಗಳು ಬಳಿದಿರುವ ಮಸಿ ಕಳೆದು ಪರಿಶುದ್ಧವಾಗಲಿ, ದೇವೇಗೌಡರು ಇನ್ನಷ್ಟು ವರ್ಷ ಬಾಳಲಿ, ಇನ್ನಷ್ಟು ರಾಜ್ಯಕ್ಕೆ ದೇಶಕ್ಕೆ ಅವರ ಸೇವೆ ದೊರಕಲಿ ಎಂದು ಹಾರೈಸಿದರು.* ಚುನಾವಣಾ ಸಭೆ
ನಂತರ ನಡೆದ ಸಭೆಯಲ್ಲಿ ವಿಧಾನ ಪರಿಷತ್ತಿನ ನೈರುತ್ಯ ಕ್ಷೇತ್ರ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಬಿಜೆಪಿ/ ಜೆಡಿಎಸ್ ಜಂಟಿ ಅಭ್ಯರ್ಥಿಗಳಾದ ಎಸ್.ಎಲ್. ಭೋಜೇಗೌಡ ಮತ್ತು ಡಾ. ಧನಂಜಯ್ ಸರ್ಜೆ ಇವರ ಗೆಲುವಿಗೆ ಯಾವ ರೀತಿಯಾಗಿ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ನಾಯಕರಾದ ಜಯಕುಮಾರ್ ಪರ್ಕಳ, ರಮೇಶ್ ಕುಂದಾಪುರ, ಗಂಗಾಧರ್ ಭಿರ್ತಿ, ರಾಮರಾವ್, ರಶೀದ್, ಕೀರ್ತಿರಾಜ್, ಶ್ರೀಕಾಂತ್ ಕಾರ್ಕಳ, ಎಂ.ಡಿ. ರಫೀಕ್, ವೆಂಕಟೇಶ್ ಎಂ.ಟಿ., ದೇವರಾಜ ತೊಟ್ಟಂ, ಪದ್ಮನಾಭ ಆರ್. ಕೋಟ್ಯಾನ್, ರಂಗ ಕೋಟ್ಯಾನ್ ಇನ್ನಿತರ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.