ಬಿಜೆಪಿ ಕೇವಲ ಪ್ರಚಾರಕ್ಕಾಗಿ ಅಥವಾ ವರದಿಗಾಗಿ ಕಾರ್ಯಕ್ರಮ ಮಾಡುವುದಿಲ್ಲ. ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷದ ತತ್ವ ಸಿದ್ಧಾಂತಗಳಡಿ ಶ್ರದ್ಧೆ ಮತ್ತು ಬದ್ಧತೆಯಿಂದ ಅಭಿಯಾನಗಳನ್ನು ಯಶಸ್ವಿಗೊಳಿಸುತ್ತದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಉಡುಪಿ: ಬಿಜೆಪಿ ಕೇವಲ ಪ್ರಚಾರಕ್ಕಾಗಿ ಅಥವಾ ವರದಿಗಾಗಿ ಕಾರ್ಯಕ್ರಮ ಮಾಡುವುದಿಲ್ಲ. ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷದ ತತ್ವ ಸಿದ್ಧಾಂತಗಳಡಿ ಶ್ರದ್ಧೆ ಮತ್ತು ಬದ್ಧತೆಯಿಂದ ಅಭಿಯಾನಗಳನ್ನು ಯಶಸ್ವಿಗೊಳಿಸುತ್ತದೆ. ವಿರಮಿಸದೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಜಿಲ್ಲಾ ಬಿಜೆಪಿ ನೇತೃತ್ವ ಹಾಗೂ ಜಿಲ್ಲಾ ರೈತ ಮೋರ್ಚಾ ಸಹಯೋಗದಲ್ಲಿ ನೀಲಾವರ ಗೋಶಾಲೆಯಲ್ಲಿ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನಕ್ಕೆ ಚಾಲನೆ ನೀಡಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹೊಸ ತಂಡ ರಚನೆಯಾಗಿದೆ. ಟೀಕೆಗಳಿಗೆ ಉತ್ತಮ ಕೆಲಸದ ಮೂಲಕ ಉತ್ತರ ನೀಡಬೇಕಾಗಿದೆ. ಸಂಪರ್ಕ, ಪ್ರವಾಸ ಮತ್ತು ಸಭೆಗಳಿಗೆ ಒತ್ತು ನೀಡಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ನಡೆಯಬೇಕು. ಎಲ್ಲರೂ ಒಟ್ಟಾಗಿ ಒಂದಾಗಿ ಪಕ್ಷದ ಸಂಕಲ್ಪ, ಉದ್ದೇಶವನ್ನು ಕಣ್ಣ ಮುಂದೆ ಇಟ್ಟುಕೊಂಡು, ಸಂಘಟಿತ ಪರಿಶ್ರಮದ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು. ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, 2014ರ ಮೊದಲು ದೇಶದಲ್ಲಿ ಯಾವ ರೀತಿಯ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಆಶಾಕಿರಣವಾಗಿ ಮೂಡಿಬಂದ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸವಾಲುಗಳನ್ನು ಸ್ವೀಕರಿಸಿ, ಆರ್ಥಿಕತೆಯಲ್ಲಿ ದೇಶವನ್ನು 3ನೇ ಸ್ಥಾನದತ್ತ ಕೊಂಡೊಯ್ದು, ಪ್ರಸಕ್ತ ಜೂ.10ರಂದು ದೇಶದ ಸುದೀರ್ಘ ಅವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವುದು ಹೆಮ್ಮೆಯ ವಿಚಾರ. ಈ ಸಂಭ್ರಮಾಚರಣೆಯ ಜೊತೆಗೆ ಒಗ್ಗಟ್ಟು ಮತ್ತು ಸಂಘಟಿತ ಪ್ರಯತ್ನದ ಮೂಲಕ ಸವಾಲುಗಳನ್ನು ಮೆಟ್ಟಿ ನಿಂತು, ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಿಸೋಣ ಎಂದರು.
ಗೋಪೂಜೆ, ಔಷಧೀಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಹಾಗೂ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಗ್ರಾಮಾಂತರ ಮಂಡಲ ವ್ಯಾಪ್ತಿಯ 12 ಮಂದಿ ಕೃಷಿಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಾಸಕರಾದ ಕಿರಣಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಉಡುಪಿ ಗ್ರಾಮಾಂತರ ಮಂಡಲಾಧ್ಯಕ್ಷ ರಾಜೀವ ಕುಲಾಲ್, ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ, ಸಹ ಸಂಚಾಲಕರಾದ ಶಿವಕುಮಾರ್ ಅಂಬಲಪಾಡಿ, ಅನಿತಾ ಶ್ರೀಧರ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಮೋಹನ್ ಚಂದ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ಯಾಮ್ ಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿ, ಪುಷ್ಪರಾಜ್ ಶೆಟ್ಟಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.