ಉಡುಪಿ: ಸರ್ಕಾರಿ ಅಧಿಕಾರಿಯೊಬ್ಬರು ಕಚೇರಿಯಲ್ಲಿಯೇ ಚಿಟ್ ಫಂಡ್ ವ್ಯವಹಾರ ನಡೆಸುವುದು, ಕಚೇರಿಯಲ್ಲಿರಬೇಕಾದ ಕಡತಗಳು ಸಿಬ್ಬಂದಿಯೊಬ್ಬರ ಚೀಲದಲ್ಲಿರುವುದನ್ನು ಕಂಡು ಲೋಕಾಯುಕ್ತ ಅಧಿಕಾರಿಗಳು ಅವಕ್ಕಾಗಿದ್ದಾರೆ.ರಾಜ್ಯ ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ಉಡುಪಿ ನಗರದ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಧಿಡೀರ್ ದಾಳಿ ನಡೆಸಿದರು, ಈ ಸಂದರ್ಭದಲ್ಲಿ ಈ ಕಚೇರಿಗಳ ಅವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷತನವನ್ನು ಕಂಡು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ, ಸ್ವಯಂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ, ಉಡುಪಿಯ ಅಧಿಕಾರಿಗಳು ಸುಶಿಕ್ಷಿತರು, ಆದರೆ ಮೋಸಗಾರರು, ಸರ್ಕಾರಿ ಕಚೇರಿಗಳೆಂದರೇ ಭ್ರಷ್ಟಾಚಾರಕ್ಕೆ ನೀಡಿರುವ ಲೈಸನ್ಸ್ ಎಂದು ತಿಳಿದುಕೊಂಡಿದ್ದಾರೆ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಅತಿ ಕಳಪೆ ಎಸ್‌ಟಿಪಿ ಇದು: ಮೊದಲು ನಿಟ್ಟೂರುನಲ್ಲಿರುನ ನಗರಸಭೆಯ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿ ಪ್ರತಿತಿಂಗಳು 3 ಲಕ್ಷ ರು. ವೆಚ್ಚದ ಬಿಲ್ ತೋರಿಸುತಿದ್ದರೂ, ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಿಸದೇ ಸಮುದ್ರಕ್ಕೆ ಬಿಡುತ್ತಿರುವುದನ್ನು ಗಮನಿಸಿ ಅಧಿಕಾರಿಗಳನ್ನು, ನಗರದ ಜನರಿಗೆ ಕೊಳಕು ನೀರು ಕುಡಿಸುತಿದ್ದೀರಿ, ಕೊಳಕು ನೀರನ್ನು ಸಮುದ್ರಕ್ಕೆ ಬಿಟ್ಟು ಮೀನು ಸಂತತಿಯನ್ನು ನಾಶ ಮಾಡುತಿದ್ದೀರಿ, ರಾಜ್ಯದಲ್ಲಿಯೇ ಅತೀ ಕಳಪೆ ಘಟಕ ಇದು ಎಂದು ತರಾಟೆಗೆ ತೆಗೆದುಕೊಂಡರು. ನಗರಸಭೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಮೇಲೆ ಸ್ವಯಂ ಕೇಸು ದಾಖಲಿಸಿಕೊಂಡರು.
ನಂತರ ಮಲ್ಪೆ ಬಂದರಿಗೆ ಭೇಟಿ ನೀಡಿದ ನ್ಯಾಯಾಮೂರ್ತಿಗಳು ಅಲ್ಲಿನ ಕಸ, ತ್ಯಾಜ್ಯಗಳು, ಅಲ್ಲಿಯೇ ಕೊಳೆಯುತ್ತಿದ್ದ ನಾಯಿ ಶವ, ಗಿಡಗಂಟಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಿನ ಜನರಿಂದ ದೂರು ಸ್ವೀಕರಿಸಿದ ಅವರು ಬಂದರು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡರು.ಚೀಲದಲ್ಲಿ ಕಚೇರಿ ಕಡತ !: ಉಪ ನೋಂದಣಿ ಕಚೇರಿಯಲ್ಲಂತೂ ಉಪಲೋಕಾಯುಕ್ತರು, ಸಿಬ್ಬಂದಿಯೊಬ್ಬರ ಚೀಲದಲ್ಲಿ 30 - 40 ಕಡತಗಳನ್ನು ನೋಡಿ, ಕಚೇರಿಯಲ್ಲಿರಬೇಕಾದ ಕಡತಗಳು ಖಾಸಗಿ ವ್ಯಕ್ತಿಯ ಚೀಲಕ್ಕೆ ಹೇಗೆ ಹೋಯಿತು, ಅದನ್ನು ದಾಖಲಿಸಿಕೊಂಡಿದ್ದೀರಾ, ಇದೇನೂ ದಂಧೆಯೇ, ಇದರಲ್ಲಿ ಯಾರಿಗೆ ಎಷ್ಟೆಷ್ಟು ಪಾಲಿದೆ ಎಂದು ತೀವ್ರವಾಗಿ ಪ್ರಶ್ನಿಸಿದಾಗ ಅಧಿಕಾರಿಗಳು ಉತ್ತರಿಸಲು ತಡಬಡಾಯಿಸಿದರು. ಅಧಿಕಾರಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದರು. ಉಡುಪಿಯ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಕಸದ ರಾಶಿ ಹಾಕಲು ಇಟ್ಟಿರುವ ತೆರೆದ ಡ್ರಮ್ ನಾರುತ್ತಿರುವುದನ್ನು, ಶೌಚಾಲಯದಲ್ಲಿ ಜನರಿಂದ ಹಣ ಪಡೆಯುತ್ತಿದ್ದ ಅವ್ಯವಸ್ಥೆಯನ್ನು ನೋಡಿ, ಅಲ್ಲಿಯೂ ಪ್ರಕರಣ ದಾಖಲಿಸಿಕೊಂಡರು.
ಅಧಿಕಾರಿಯ ಚಿಟ್‌ಫಂಡ್ !: ತಾಲೂಕು ಕಚೇರಿಯಲ್ಲಿ 1500ಕ್ಕೂ ಹೆಚ್ಚು ಬಾಕಿ ಅರ್ಜಿಗಳ ಬಗ್ಗೆ ತಿಳಿದು ಅಧಿಕಾರಿಗಳಿಗೆ ತೀವ್ರ ಎಚ್ಚರಿಕೆ ನೀಡಿದರು. ಅಲ್ಲಿನ ಕ್ಯಾಶ್ ರಿಜಿಸ್ಟರ್, ಮೂವ್‌ಮೆಂಟ್ ರಿಜಿಸ್ಟರ್, ಅಟೆಂಡೆನ್ಸ್ ರಿಜಿಸ್ಟ್ರರ್‌ಗಳಲ್ಲಿನ ಅಸಮರ್ಪಕ ನಿರ್ವಹಣೆ ನೋಡಿ ಹಣೆ ಚಚ್ಚಿಕೊಂಡ ಉಪಲೋಕಾಯುಕ್ತರು, ಶಿಸ್ತು ಕ್ರಮಕ್ಕೆ ಸೂಚಿಸಿದರು.ಜೀನ್ಸ್ ಪ್ಯಾಂಟ್ ನೋಡಿ ಸಸ್ಪೆಂಡ್ ಆದೇಶ: ಸಿಬ್ಬಂದಿಗಳು ಜೀನ್ಸ್ ಪ್ಯಾಂಟ್ ಧರಿಸಿಕೊಂಡು ಓಡಾಡುತ್ತಿರುವುದನ್ನು ಕಂಡು ರೇಗಿದ ಉಪಲೋಕಾಯುಕ್ತರು, ಸರ್ಕಾರದ ವಸ್ತ್ರಸಂಹಿತೆ ಇದ್ದರೂ ಕ್ಯಾರೇ ಎನ್ನದ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡುವಂತೆ ಆದೇಶಿಸಿದರು. ಇಲ್ಲಿನ ಸಿಬ್ಬಂದಿಯೊಬ್ಬರು ಕಚೇರಿ ಕಡತಗಳಿಗಿಂತಲೂ ತಾವು ನಡೆಸುತ್ತಿರುವ ಚಿಟ್‌ಫಂಡ್ ನ ರಿಜಿಸ್ಚರ್ ಚೆನ್ನಾಗಿ ನಿರ್ವಹಿಸುತ್ತಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅವರ ಮೇಲೆ ಕೇಸು ದಾಖಲಿಸಲೂ ಆದೇಶಿಸಿದರು.
ಆಸ್ಪತ್ರೆ ಕ್ಯಾಂಟೀನ್ ಮುಚ್ಚಿ: ನಂತರ ನ್ಯಾಯಮೂರ್ತಿಗಳು ಜಿಲ್ಲಾಸ್ಪತ್ರೆಗೆ ತೆರಳಿ ಅಲ್ಲಿ ಜನನ - ಮರಣ ದಾಖಲೆಪತ್ರಗಳು ರಾಶಿ ಬಿದ್ದಿರುವುನ್ನು ನೋಡಿ ತಕ್ಷಣ ಅವುಗಳನ್ನು ಅಂಚೆ ಮೂಲಕ ವಿಲೇ ಮಾಡುವಂತೆ ಸೂಚನೆ ನೀಡಿದರು. ಆಸ್ಪತ್ರೆಯ ಕ್ಯಾಂಟೀನ್ ಅಸಮರ್ಪಕ ನಿರ್ವಹಣೆಯನ್ನು ನೋಡಿ, ತಕ್ಷಣ ಬಂದ್ ಮಾಡುವಂತೆ ಆದೇಶಿಸಿದರು. ನಗರಸಭೆ ಕಚೇರಿಗೆ ಹಠಾತ್ ಭೇಟಿ ಮಾಡಿ, ಬಯೋಮೆಟ್ರಿಕ್, ಇ-ಆಸ್ತಿ, ಉದ್ದಿಮೆ ಪರವಾನಿಗೆ, ನಗರಸಭೆಯ ಭೂಮಿಯ ಅತಿಕ್ರಮಗಳನ್ನು ಪರಿಶೀಲಿಸಿ, ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ದೂರುಗಳನ್ನು ದಾಖಲಿಸಿಕೊಂಡರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಉಪನಿಬಂಧಕ ಅರವಿಂದ್ ಎನ್.ವಿ., ಜಿಪಂ ಸಿಇಓ ಪ್ರತೀಕ್ ಬಾಯಲ್, ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ ದಿನೇಶ್ ಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಸಹಾಯಕ ಕಮೀಷನರ್ ರಶ್ಮಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.* ಡಿಸಿ ಅವರು ಮೀಟಿಂಗ್‌ನಲ್ಲಿ ಉಡುಪಿಯ ಜನ ಬಹಳ ಬುದ್ಧಿವಂತರು, ಇಲ್ಲಿ ಸಾಕ್ಷರರು ಜಾಸ್ತಿ ಎಂದು ಹೇಳಿದ್ದಾರೆ. ವಿದ್ಯಾವಂತ ಮೋಸಗಾರರಿಂದ ದೇಶ ಹಾಳಾಗುತ್ತಿದೆ ಎನ್ನುತ್ತಾರೆ, ಅದಕ್ಕೆ ಇಲ್ಲಿ ಉದಾಹರಣೆ ಕಾಣುತ್ತಿದೆ. ಇಲ್ಲಿನ ಅಧಿಕಾರಿಗಳನ್ನು ಏನೇ ಕೇಳಿದರೂ ಬಾಯಿ ಮುಚ್ಚಿ ಕೂತಿರುತ್ತಾರೆ, ಮೌನವೇ ಉತ್ತರ ಎಂಬಂತೆ ಇರುತ್ತಾರೆ. ಇಲ್ಲಿನ ಅಧಿಕಾರಿಗಳು ವಿದ್ಯಾವಂತರಿದ್ದಾರೆ, ಆದರೆ ಮೋಸಗಾರರಿದ್ದಾರೆ, ನಮಗೇ ಯಾಮಾರಿಸುತ್ತಾರೆ, ಸರ್ಕಾರಿ ಕಚೇರಿ ಎಂದರೇ ಭ್ರಷ್ಟಚಾರಕ್ಕೆ ಲೈಸೆನ್ಸ್ ಎಂದುಕೊಂಡಿದ್ದಾರೆ. ಎಲ್ಲವನ್ನೂ ಪರಿಶೀಲಿಸಿದ್ದೇನೆ ಮತ್ತು ಸುಮೋಟೋ ಪ್ರಕರಣ ದಾಖಲಿಸುತ್ತೇವೆ.ನ್ಯಾ. ಬಿ. ವೀರಪ್ಪ, ಕರ್ನಾಟಕ ಉಪಲೋಕಾಯುಕ್ತರು