ಉಡುಪಿ: ಪೌರಕಾರ್ಮಿಕರ ಆರೋಗ್ಯ ತಪಾಸಣೆ

KannadaprabhaNewsNetwork | Published : Sep 25, 2024 12:55 AM

ಸಾರಾಂಶ

ಉಡುಪಿ ನಗರಸಭೆ ವತಿಯಿಂದ ಸ್ವಭಾವ ಸ್ವಚ್ಛತೆ - ಸಂಸ್ಕಾರ ಸ್ವಚ್ಛತೆ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಹಾಗೂ ಪೌರಕಾರ್ಮಿಕರ ಸಾಮಾನ್ಯ ಆರೋಗ್ಯ ತಪಾಸಣಾ ಕಾರ್ಯಕ್ರಮ ಮಂಗಳವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರಸಭೆ ವತಿಯಿಂದ ಸ್ವಭಾವ ಸ್ವಚ್ಛತೆ - ಸಂಸ್ಕಾರ ಸ್ವಚ್ಛತೆ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಹಾಗೂ ಪೌರಕಾರ್ಮಿಕರ ಸಾಮಾನ್ಯ ಆರೋಗ್ಯ ತಪಾಸಣಾ ಕಾರ್ಯಕ್ರಮ ಮಂಗಳವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ. ಗಡಾದ್ ಮಾತನಾಡಿ, ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಿರುವುದರಿಂದಲೇ ಇಂದು ನಮ್ಮೆಲ್ಲರ ಆರೋಗ್ಯ ಉತ್ತಮವಾಗಿದೆ. ಅವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುತ್ತಿದೆ. ಕೆಲಸದ ಒತ್ತಡದಲ್ಲಿ ಮಾಡುವ ಕೆಲವೊಂದು ನಿರ್ಲಕ್ಷ್ಯತನದಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ. ಪೌರಕಾರ್ಮಿಕರು ಆರೋಗ್ಯವನ್ನು ಈ ಒಂದು ದಿನ ತಪಾಸಣೆ ಶಿಬಿರಗಳಿಗೆ ಸೀಮಿತವಾಗಿಟ್ಟುಕೊಳ್ಳದೇ ನಿತ್ಯ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ, ವೈದ್ಯರ ಬಳಿ ಮಾಹಿತಿ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್ ಮಾತನಾಡಿ, ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯವಾಗಿರುತ್ತದೆ. ಪೌರಕಾರ್ಮಿಕರು ಆರೋಗ್ಯ ಪೂರ್ಣವಾಗಿದ್ದರೆ ನಗರದ ಸ್ವಚ್ಛತೆಯನ್ನು ಕಾಪಾಡಿ ಎಲ್ಲರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದ ಅವರು, ಜಿಲ್ಲಾಸ್ಪತ್ರೆಯಲ್ಲಿರುವ ಆರೋಗ್ಯ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಪೌರಾಯುಕ್ತ ರಾಯಪ್ಪ ಮಾತನಾಡಿ, ಇಂದಿನ ಜೀವನ ಶೈಲಿಯಿಂದ ಕಾಯಿಲೆಗಳು ನಮ್ಮನ್ನು ಆಳುವಂತಾಗಿದೆ. ಮನೆಯ ಆಹಾರಕ್ಕಿಂದ ಹೊರಗಿನ ಆಹಾರಗಳೇ ಹೆಚ್ಚು ಬಳಸುತ್ತಿದ್ದೇವೆ. ಹೀಗಾಗಿ ಆರೋಗ್ಯ ಹಾಳಾಗುತ್ತಿದೆ. ನಾವು ದುಶ್ಚಟಗಳಿಂದ ದೂರ ಇದ್ದಾಗ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ಪೌರ ಕಾರ್ಮಿಕರು ಉತ್ತಮ ಆಹಾರ ಸೇವಿಸುವುದರೊಂದಿಗೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಣಿಪಾಲದ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ ಡಾ. ಅನುಷಾ, ಪ್ರಸಾದ್ ನೇತ್ರಾಲಯದ ವೈದ್ಯೆ ಡಾ. ಕೀರ್ತಿ, ಮಣಿಪಾಲ ಪ್ರಸಾದ್ ಕ್ಲಿನಿಕ್‌ನ ವೈದ್ಯರು ಮತ್ತು ಸಿಬ್ಬಂದಿ, ಜಿಲ್ಲಾ ಕನ್ಸಲ್ಟೆಂಟ್ ಮಂಜುಳಾ ಶೆಟ್ಟಿ, ನಗರಸಭೆಯ ವ್ಯವಸ್ಥಾಪಕ ಎಸ್.ಎಸ್. ನಾರಾಯಣ, ಆರೋಗ್ಯ ನಿರೀಕ್ಷಕರಾದ ಮನೋಹರ್, ಸುರೇಂದ್ರ ಹೋಬಳಿದಾರ್, ಹರೀಶ್ ಬಿಲ್ಲವ, ಸೂಪರ್ ವೈಸರ್‌ಗಳು ಹಾಗೂ ಪೌರಕಾರ್ಮಿಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿದರು, ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹಾ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

Share this article