ಉಡುಪಿ: ಜಗದ್ಗುರು ಮಧ್ವಾಚಾರ್ಯರ ಜಯಂತ್ಯುತ್ಸವ ಸಂಪನ್ನ

KannadaprabhaNewsNetwork | Published : Oct 14, 2024 1:23 AM

ಸಾರಾಂಶ

ನೂರು ಮಂದಿ ವೈದಿಕರಿಂದ ತ್ರಿಶತ ಶ್ರೀವಾಯುಸ್ತುತಿ ಪಾರಾಯಣ, ಪುಷ್ಪಾರ್ಚನೆ ಹಾಗೂ ರಥೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ದ್ವೈತ ಮತ ಪ್ರತಿಪಾದಕ, ಉಡುಪಿ ಶ್ರೀಕೃಷ್ಣ ಪ್ರತಿಷ್ಠಾಪಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತ್ಯುತ್ಸವವನ್ನು ಭಾನುವಾರ ವಿಜಯದಶಮಿ ಪರ್ವಕಾಲದಲ್ಲಿ ಪೂಜೆ ಪಾರಾಯಣಗಳೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯಲ್ಲಿ ಮಧ್ವ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು.

ಆಚಾರ್ಯ ಮಧ್ವರು ಅದೃಶ್ಯರಾದ ಶ್ರೀ ಅನಂತೇಶ್ವರ ದೇವಸ್ಥಾನದ ಆಚಾರ್ಯ ಮಧ್ವ ಸನ್ನಿಧಿಯಲ್ಲಿ ನೂರು ಮಂದಿ ವೈದಿಕರಿಂದ ತ್ರಿಶತ ಶ್ರೀವಾಯುಸ್ತುತಿ ಪಾರಾಯಣ ಹಾಗೂ ಪುಷ್ಪಾರ್ಚನೆ ನಡೆಯಿತು. ಪುತ್ತಿಗೆ ಉಭಯ‌ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.

ಸಂಜೆ ರಥಬೀದಿಯಲ್ಲಿ ಆಚಾರ್ಯ ಮಧ್ವರ ಭಾವಚಿತ್ರ ಹಾಗೂ ಗ್ರಂಥಗಳ ರಥೋತ್ಸವ ನಡೆಯಿತು. ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಚಾರ್ಯ ಮಧ್ವರ ಕುರಿತು ಉಪನ್ಯಾಸ ನೀಡಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಪಣಿಯಾಡಿಯ ಶ್ರೀಲಕ್ಷ್ಮೀ ಅನಂತಾಸನ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆದ ಶ್ರೀ ಮಧ್ವ ಜಯಂತಿ ಕಾರ್ಯಕ್ರಮದಲ್ಲಿ ವೇದವ್ಯಾಸ ಐತಾಳರ ನೇತೃತ್ವದಲ್ಲಿ ಋತ್ವಿಜರಿಂದ ಶ್ರೀ ವಾಯುಸ್ತುತಿ ಹೋಮ, ವಿಶೇಷ ಪೂಜೆ ನಡೆಯಿತು. ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರಿಂದ ಆಚಾರ್ಯ ಮಧ್ವರ ತತ್ವ ಚಿಂತನೆ ನಡೆಯಿತು.

ಪಾಡಿಗಾರು ಪುತ್ತಿಗೆ ಮಠ, ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲೂ ಮಧ್ವ ಜಯಂತಿ ಆಚರಿಸಲಾಯಿತು.

ಆಸ್ಟ್ರೇಲಿಯಾದ ಪುತ್ತಿಗೆ ಶಾಖಾ ಮಠದಲ್ಲಿ ಮಧ್ವ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಇಲ್ಲಿ

ಕಳೆದ ಬಾರಿಯ ಮಧ್ವ ನವಮಿಯಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀ ಮಧ್ವಾಚಾರ್ಯರ ಮೂರ್ತಿ ಪ್ರತಿಷ್ಠಾಪಿಸಿದ್ದರು. ಈ ಬಾರಿ ಮಧ್ವವಿಜಯ ಪಾರಾಯಣ, ವಾಯುಸ್ತುತಿ, ದ್ವಾದಶ ಸ್ತೋತ್ರ ಇತ್ಯಾದಿಗಳ ಪಠಣ ನಡೆಯಿತು. ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

Share this article