ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಬುಧವಾರ ರಾತ್ರಿ ತಾಂಡವವಾಡಿದ ಗಾಳಿಗೆ 50ಕ್ಕೂ ಹೆಚ್ಚು ಮನೆ ಮತ್ತು 8 ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಅವುಗಳಲ್ಲಿ ಸುಮಾರು 5 ಮನೆಗಳು ಸಂಪೂರ್ಣ ಹಾನಿಗೊಂಡಿವೆ. 20ಕ್ಕೂ ಹೆಚ್ಟು ಅಡಕೆ ತೋಟಗಳು ನಿರ್ಣಾಮವಾಗಿವೆ. ಸುಮಾರು 50 ಲಕ್ಷ ರು.ಗಳಿಗೂ ಮಿಕ್ಕಿ ನಷ್ಟ ಸಂಭವಿಸಿದೆ.ಬ್ರಹ್ಮಾವರ ತಾಲೂಕಿನ ಹೊಸೂರು ದುರ್ಗಪ್ಪ ಸೇರ್ವೇಗಾರ್ ಅವರ ಮನೆಗೆ 1,00,000 ರು., ಪಾರ್ವತಿ ಸಂಜೀವಅವರ ಮನೆಗೆ 5,00,000 ರು., ವಿಶ್ವನಾಥ ಸೇರ್ವೇಗಾರ್ ಅವರ ಮನೆಗೆ 5,00,000 ರು., ಕಮಲಾವತಿ ಭಟ್ ಅವರ ಮನೆಗೆ 1,00,000 ರು., ನಾರಾಯಣ ಸಾವಂತ್ ಅವರ ಮನೆಗೆ 1,00,000 ರು., ನಾಗೇಶ್ ಸೇರ್ವೆಗಾರ್ ಅವರ ಮನೆಗೆ 1,00,000 ರು., ಕುಂದಾಪುರ ತಾಲೂಕಿನ ರಟ್ಟಾಡಿ ಗ್ರಾಮದ ಜಯಂತಿ ನಾಗರಾಜ ಅವರ ಮನೆಯ ಮೇಲೆ ಮರ ಬಿದ್ದು 1,20,000 ರು., ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಲಕ್ಷ್ಮೀ ಸಂಜೀವ ಅವರ ಮನೆ 2,30,000 ರು.ಗಳಷ್ಟು ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕಿನ ರಟ್ಟಾಡಿ ಗ್ರಾಮವೊಂದರಲ್ಲಿಯೇ ಸುಂಟರಗಾಳಿಗೆ 10ಕ್ಕೂ ಹೆಚ್ಚು ಕುಟುಂಬಗಳ ಎಕ್ರೆ ಗಟ್ಟಲೇ ಪ್ರದೇಶದಲ್ಲಿ ಅಡಕೆ ತೋಟ ನಾಶವಾಗಿದೆ.ಸುಂಟರಗಾಳಿಗೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಲಕ್ಷ್ಮೀ ಸಂಜೀವ ಅವರ ತೋಟದಲ್ಲಿ ನೂರಾರು ಅಡಕೆ ಮರಗಳು ಧರೆಗುರುಳಿದ್ದು, 4,92,500 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಇದೇ ಗ್ರಾಮದ ಸುಧಾಕರ ಶೆಟ್ಟಿ ಅವರ ಅಡಕೆ ತೋಟಕ್ಕೆ 1,20,000 ರು. ಮತ್ತು ಕುಂದಾಪುರಕುಳಂಜೆ ಗ್ರಾಮದ ಗುಲಾಬಿ ಅವರ ತೋಟಗಾರಿಕೆ ಬೆಳೆಗೆ 1,00,000 ರು. ನಷ್ಟ ಉಂಟಾಗಿದೆ.
ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ 6 ಮತ್ತು ಕುಂದಾಪುರ ತಾಸೂರಿನ 2 ಜಾನುವಾರು ಕೊಟ್ಟಿಗೆಗಳಿಗೂ ಗಾಳಿ ಮಳೆಯಿಂದ ಹಾನಿ ಸಂಭವಿಸಿದೆ.* ಈ ಬಾರಿ ದಾಖಲೆಯ ಮಳೆ
ಬುಧವಾರ ರಾತ್ರಿ ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲದ ದಾಖಲೆಯ 132.50 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 111.40, ಕುಂದಾಪುರ 191, ಉಡುಪಿ 87.20, ಬೈಂದೂರು 135.10, ಬ್ರಹ್ಮಾವರ 113.90, ಕಾಪು 38.50, ಹೆಬ್ರಿ 140.50 ಮಿ.ಮೀ. ಮಳೆ ದಾಖಲಾಗಿದೆ.ಬಿಟ್ಟುಬಿಟ್ಟು ಜೋರಾಗಿ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ಪ್ರವಾಹ ತುಂಬುತ್ತಿಲ್ಲ. ಗುರುವಾರ ಕೂಡಾ ಮೂರ್ನಾಲ್ಕು ಸಲ ಭಾರಿ ಮಳೆಯಾಗಿದೆ. ಜು.9ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
----ಬೈಂದೂರು ವಲಯ ಶಾಲೆಗಳಿಗೆ ರಜೆಹೆಚ್ಚು ಕಾಲುಸಂಕಗಳಿರುವ ಬೈಂದೂರು ತಾಲೂಕಿನಲ್ಲಿ ಮತ್ತು ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನದಿಗಳಲ್ಲಿ ಪ್ರವಾಹದ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೈಂದೂರು ಶಿಕ್ಷಣ ವಲಯ ವ್ಯಾಪ್ತಿಗೆ ರಜೆ ಘೋಷಿಸಲಾಗಿತ್ತು. ಇಲ್ಲಿನ ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ರಜೆ ನೀಡಲಾಗಿತ್ತು ಎಂದು ಡಿಸಿ ಡಾ. ವಿದ್ಯಾ ಕುಮಾರಿ ತಿಳಿಸಿದ್ದಾರೆ.