ಉಡುಪಿ ನಗರಸಭೆ: 5.17 ಕೋಟಿ ರು. ಮಿಗತೆ ಬಜೆಟ್‌

KannadaprabhaNewsNetwork | Published : Mar 16, 2025 1:48 AM

ಸಾರಾಂಶ

ಉಡುಪಿ ನಗರಸಭೆಯಲ್ಲಿ ಶನಿವಾರ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ ಸುಮಾರು 5.17 ಕೋಟಿ ರು.ಗಳ ಮಿಗತೆ ಬಜೆಟ್‌ ಮಂಡಿಸಿದರು. ವಿಶೇಷ ಎಂದರೆ ನಗರಸಭೆಯ ವಿಪಕ್ಷ ಕಾಂಗ್ರೆಸ್ ಸದಸ್ಯರೂ ಈ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಪಕ್ಷ ಕಾಂಗ್ರೆಸ್ ಸದಸ್ಯರಿಂದಲೂ ಮೆಚ್ಚುಗೆ

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರಸಭೆಯಲ್ಲಿ ಶನಿವಾರ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ ಸುಮಾರು 5.17 ಕೋಟಿ ರು.ಗಳ ಮಿಗತೆ ಬಜೆಟ್‌ ಮಂಡಿಸಿದರು. ವಿಶೇಷ ಎಂದರೆ ನಗರಸಭೆಯ ವಿಪಕ್ಷ ಕಾಂಗ್ರೆಸ್ ಸದಸ್ಯರೂ ಈ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಸ್ತುತ ನಗರಸಭಾ ಆಡಳಿತಕ್ಕೆ ಕೇವಲ 8 ತಿಂಗಳ ಅವಧಿ ಇದ್ದು, ಬಜೆಟ್‌ನಲ್ಲಿ ಸುಮಾರು 250.63 ಕೋಟಿ ರು.ಗಳಷ್ಟು ಆದಾಯವನ್ನು ನಿರೀಕ್ಷಿಸಲಾಗಿದೆ, ಜೊತೆಗೆ 5.17 ಕೋಟಿ ರು.ಗಳಷ್ಟು ಕಡಿಮೆ 245.46 ಕೋಟಿ ರು.ಗಳಷ್ಟು ವೆಚ್ಚವನ್ನು ಅಂದಾಜಿಸಲಾಗಿದೆ.ವೆಚ್ಚಗಳ ಅಂದಾಜು ಹೀಗಿದೆ:

ಬಜೆಟ್‌ನಲ್ಲಿ ಅತೀ ದೊಡ್ಡ ವೆಚ್ಚ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸುಮಾರು 26.07 ಕೋಟಿ ರು.ಗಳನ್ನು ಮೀಸಲಿರಿಸಲಾಗಿದೆ. ಕುಡಿಯುವ ನೀರು ಸರಬರಾಜಿಗೆ 17.51 ಕೋಟಿ ರು., ದಾರಿದೀಪ ನಿರ್ವಹಣೆಗೆ 7.95 ಕೋಟಿ ರು., ಒಳಚರಂಡಿ ವಿಸ್ತರಣೆ ಮತ್ತು ನಿರ್ವಹಣೆಗೆ 9.89 ಕೋಟಿ ರು. ಹಾಗೂ ಆಡಳಿತಾತ್ಮಕ ವೆಚ್ಚ 3.29 ಕೋಟಿ ರು.ಗಳನ್ನು ಅಂದಾಜಿಸಲಾಗಿದೆ.

ಉಳಿದಂತೆ ಎಸ್ಸಿಎಸ್ಟಿ ಶ್ರೇಯೋಭಿವೃದ್ಧಿ ನಿಧಿಗೆ 2.07 ಕೋಟಿ ರು., ಉದ್ಯಾನವನಗಳ ನಿರ್ವಹಣೆಗೆ 2.50 ಕೋಟಿ ರು., ಬಡಜನರ ಕಲ್ಯಾಣ ನಿಧಿಗೆ 50 ಲಕ್ಷ ರು., ವಿಕಲಚೇತನರ ಕಲ್ಯಾಣ ನಿಧಿಗೆ 34.49 ಲಕ್ಷ ರು., ಮಾಹಿತಿ ಮತ್ತು ಶಿಕ್ಷಣಕ್ಕಾಗಿ 55 ಲಕ್ಷ ರು., ಪ್ರಾ.ಆರೋಗ್ಯ ಕೇಂದ್ರಗಳ ನಿರ್ವಹಣೆಗೆ 50 ಲಕ್ಷ ರು. ಹಾಗೂ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ 30 ಲಕ್ಷ ರು.ಗಳನ್ನು ಮೀಸಲಿರಿಸಲಾಗಿದೆ.

ಆದಾಯ ನಿರೀಕ್ಷೆ ಹೀಗಿದೆ:

ನೀರು ಸರಬರಾಜು ಶುಲ್ಕ 19 ಕೋಟಿ ರು., ಆಸ್ತಿ ತೆರಿಗೆಯಿಂದ 20 ಕೋಟಿ ರು., 15 ಮತ್ತು 16ನೇ ಕೇಂದ್ರ ಹಣಕಾಸು ಆಯೋಗಗಳಿಂದ 9.19 ಕೋಟಿ ರು., ರಾಜ್ಯ ಹಣಕಾಸು ಆಯೋಗದಿಂದ 22.10 ಕೋಟಿ ರು., ಎಸ್‌ಎಫ್‌ಸಿ ಅನುದಾನ 3 ಕೋಟಿ ರು., ಸ್ವಚ್ಛ ಭಾರತ್ ಮಿಷನ್ ಅನುದಾನ 3.42 ಕೋಟಿ ರು., ತ್ಯಾಜ್ಯ ನಿರ್ವಹಣೆ ಅನುದಾನ 2.56 ಕೋಟಿ ರು., ವಾಣಿಜ್ಯ ಸಂಕೀರ್ಣಗಳಿಂದ 2 ಕೋಟಿ ರು. ಮತ್ತು ಇತರ ಮೂಲಗಳಿಂದ ಒಟ್ಟು 143 ಕೋಟಿ ರು. ಹಾಗೂ ಆರಂಭ ಶಿಲ್ಕು ಸೇರಿ 250 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.

ನಗರಸಭೆಗೆ ಹೊಸ ಕಟ್ಟಡ:

ಪ್ರಸ್ತುತ ನಗರಸಭೆಯಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ, ಹೊಸ ಕಟ್ಟಡ ನಿರ್ಮಾಣಕ್ಕೆ ಹಳೆ ತಾಲೂಕು ಆಫೀಸ್ ಕಟ್ಟಡದ 0.96 ಎಕ್ರೆ ನಿವೇಶನ ಮಂಜೂರಾಗಿದೆ. ಇದಲ್ಲಿ ನಗರೋತ್ಥಾನ ಮತ್ತು ನಗರಸಭಾ ನಿಧಿಯಿಂದ ಒಟ್ಟು 45 ಕೋಟಿ ರು. ವೆಚ್ಚದಲ್ಲಿ ತಳ, ನೆಲ ಮತ್ತು 3 ಮಹಡಿಗಳ ಸುಸಜ್ಜಿತ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುಮೋದನೆಯ ಹಂತದಲ್ಲಿದೆ ಎಂದು ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.ವಿಪಕ್ಷ ಸದಸ್ಯರಿಂದ ಶ್ಲಾಘನೆ:

ನಿರೀಕ್ಷೆಯಂತೆ ಆಡಳಿತ ಪಕ್ಷ ಬಿಜೆಪಿ ಸದಸ್ಯರಾದ ಸುಮಿತ್ರಾ ನಾಯಕ್, ವಿಜಯ ಕೊಡವೂರು ಮುಂತಾದವರು ಈ ಬಜೆಟ್ಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ವಿಪಕ್ಷ ನಾಯಕ ರಮೇಶ್‌ ಕಾಂಚನ್ ಅವರು ಉತ್ತಮ ಬಜೆಟ್‌ ಮಂಡನೆಯಾದರೆ ಸಾಲದು, ಸರಿಯಾಗಿ ಅನುಷ್ಠಾನಕ್ಕೂ ಬರಬೇಕು ಎಂಬ ಎಚ್ಚರಿಕೆಯನ್ನು ನೀಡಿದರು. ಅಮೃತಾ ಕೃಷ್ಣಮೂರ್ತಿ ಅವರು ಬಜೆಟ್ಟನ್ನು ಸ್ವಾಗತಿಸಿ, ನಗರಸಭಾ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ ಇನ್ನಷ್ಟು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಆದಾಯ ಗಳಿಸಬಹುದು ಎಂದರು. ಸುರೇಶ್‌ ಶೆಟ್ಟಿ ಬನ್ನಂಜೆ ಅವರು ಉತ್ತಮ ಬಜೆಟ್‌, ಒಳಚರಂಡಿಗೆ ಆದ್ಯತೆ ನೀಡಿ ಎಂದರು.ಸಭೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಮತ್ತು ಪೌರಾಯುಕ್ತ ಡಾ. ಉದಯ ಶೆಟ್ಟಿ ವೇದಿಕೆಯಲ್ಲಿದ್ದರು.

Share this article