ಉಡುಪಿ: ಲಿಂಗತ್ವ ಅಲ್ಪಸಂಖ್ಯಾತರ ಸ್ಪಉದ್ಯೋಗಕ್ಕೆ ಕೇವಲ ಒಂದು ಅರ್ಜಿ!

KannadaprabhaNewsNetwork |  
Published : Sep 21, 2024, 02:03 AM IST
ಲಿಂಗ20 | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕುಂದುಕೊರತೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಲಿಂಗತ್ವ ಅಲ್ಪಸಂಖ್ಯಾತರು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪುನರ್ವಸತಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಧನ ನೀಡುತ್ತಿದೆ. ಪ್ರಸ್ತುತ ಸಾಲಿನಲ್ಲಿ 15 ಜನರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಕೇವಲ ಒಬ್ಬ ಲಿಂಗತ್ವ ಅಲ್ಪಸಂಖ್ಯಾತರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮಗಳ ಲಾಭ ಪಡೆಯುವುದರೊಂದಿಗೆ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದರು.ಸರ್ಕಾರದ ಗೃಹಲಕ್ಷ್ಮೀ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ ಪಡೆದವರು ಇದರ ಲಾಭ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಈವರೆಗೆ 32 ಜನ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ಸರ್ಕಾರದ ಸೌಲಭ್ಯ ಪಡೆಯಲು ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ. ಇದಕ್ಕಾಗಿ ನ್ಯಾಷನಲ್ ಪೋರ್ಟಲ್ ಫಾರ್ ಟ್ರಾನ್ಸ್‌ಜೆಂಡರ್ ಪರ್ಸನ್ಸ್‌ನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಗುರುತಿನ ಚೀಟಿ ನೀಡಲಾಗುವುದು ಎಂದು ತಿಳಿಸಿದರು.ಅಲ್ಪಸಂಖ್ಯಾತರ ಗೃಹ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಅಗತ್ಯ ಆರ್ಥಿಕ ನೆರವು, ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಲಭ್ಯತೆಯ ಆದ್ಯತೆಯ ಮೇಲೆ ನಿವೇಶನ ಮಂಜೂರು ಮಾಡಲಾಗುವುದು ಎಂದರು.ಅಲ್ಪ ಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಸರ್ಕಾರದ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕರೆದಾಗ ಅವುಗಳಲ್ಲಿ ಭಾಗವಹಿಸಬೇಕು ಎಂದ ಅವರು, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ನಿಯಮಾನುಸಾರ ಸರಳವಾಗಿ ನೀಡುವಂತೆ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಎಎಸ್ಪಿ ಟಿ. ಸಿದ್ಧಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ನಗರಸಭೆ ಪೌರಾಯುಕ್ತ ರಾಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

----------ನಮ್ಮ ಮಕ್ಕಳ ಬಗ್ಗೆ ಶಾಲೆಗಳಲ್ಲಿ ತಾರತಮ್ಯ

ಶಾಲಾ ಹಂತಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮಕ್ಕಳಿಗೆ ತಾರತಮ್ಯ ಮಾಡುವುದು ಕಂಡು ಬರುತ್ತಿದೆ. ಶಾಲಾ ಶಿಕ್ಷಕರು ವಿದ್ಯಾರ್ಥಿ ಹಂತದಲ್ಲಿಯೇ ಈ ಬಗ್ಗೆ ಅರಿವು ಮೂಡಿಸುವುದು ಸೂಕ್ತ. ಸರ್ಕಾರಿ ಉದ್ಯೋಗಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಿಡಬೇಕು. ಸಮಾಜದಲ್ಲಿ ನಮ್ಮನ್ನು ನೋಡುವ ರೀತಿಯಲ್ಲಿ ಬದಲಾವಣೆ ಆಗಬೇಕು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಲಿಂಗತ್ವ ಅಲ್ಪಸಂಖ್ಯಾತರು ಸಭೆಯಲ್ಲಿ ಸಲ್ಲಿಸಿದರು.

PREV

Recommended Stories

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು
ಚೈತಾಲಿ ಹತ್ಯೆ ಖಂಡಿಸಿ ಪ್ರತಿಭಟನೆ