ಕನ್ನಡಪ್ರಭ ವಾರ್ತೆ ಕಾರ್ಕಳ
ಮೂಡುಬಿದಿರೆಯ ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು, ಬಸದಿ ಸ್ವಚ್ಛತಾ ಸಮಿತಿ, ಸ್ಥಳೀಯ ಮಹಿಳಾ ಸಂಘಟನೆ, ಧವಳತ್ರಯ ಜೈನ ಕಾಶಿ ಟ್ರಸ್ಟ್, ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ‘ಒಪ್ಪಿಕೋ ಪಚ್ಚೆವನಸಿರಿ ಜಾಗೃತಿ ಅಭಿಯಾನ’ ವಿಶೇಷ ಕಾರ್ಯಕ್ರಮ ಜರುಗಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿಶ್ವಸ್ಥ ವಿವೇಕ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿ, ಅಭಿವೃದ್ಧಿಯ ಧಾವಂತದಲ್ಲಿ ಉತ್ಪಾದನೆಯಾಗುತ್ತಿರುವ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ, ನಿರ್ವಹಣೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.ಉದ್ಯಮಿಗಳಾದ ಶ್ರೀಪತಿ ಭಟ್, ಎಂಸಿಸಿ ಬ್ಯಾಂಕ್ ನಿರ್ವಹಣಾಧಿಕಾರಿ ಚಂದ್ರಶೇಖರ್, ಎಕ್ಸ್‌ಲೆಂಟ್ ಕಾಲೇಜಿನ ಯುವರಾಜ್ ಜೈನ್ ಮತ್ತು ರಶ್ಮಿತಾ ಯುವರಾಜ್, ಪ್ರಾಚ್ಯ ಸಂಚಯದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹಾಗೂ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಉಡುಪಿ ತುಳುಕೂಟದ ಪ್ರ.ಕಾರ್ಯದರ್ಶಿ ಗಂಗಾಧರ ಕಿದಿಯೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಆಶೀರ್ವಾದ ನೀಡಿದ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿಗಳು, ಗಿಡ ನೆಟ್ಟು, ಪೋಷಿಸಲು ಮರೆಯಬೇಡಿ. ಗಳಿಕೆಯ ಒಂದಂಶ ದಾನ ಮಾಡಿ. ವಿನಾಶದ ಅಂಚಿನಲ್ಲಿರುವ ಶ್ರೀತಾಳೆ ವೃಕ್ಷ ಮೊದಲಾದ ಬೀಜ ಬಿತ್ತಿ ಗಿಡ ಪೋಷಿಸಿ ಬೆಳೆಸೋಣ, ಹಸುರು ಉಳಿಸೋಣ ಎಂಬ ಪ್ರತಿಜ್ಞೆಯನ್ನು ಬೋಧಿಸಿದರು.ಪ್ರಾಚ್ಯ ವಸ್ತು ಸಂಚಯ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಅವರು ಶಿಖರೋಪನ್ಯಾಸ ನೀಡಿ, ಶಾಸನದಲ್ಲಿರುವಂತೆ ಸುಮಾರು 834 ವರ್ಷಗಳ ಹಿಂದೆ ಜಿನ ಹೆಣ್ಣುಮಗಳು ಸಿರಿದೇವಿ (18-ಜುಲೈ ಕ್ರಿ.ಶ.1190)ರಲ್ಲಿ ವಿಜಯಪುರ ಹಿರೇಬೇವಿನೂರುನಲ್ಲಿ ಗಿಡಮರಗಳನ್ನು ದಾನ ನೀಡುವ ‘ಕ್ಷಿತಿರೂಹ ನೋಂಪಿ ಆಚರಣೆ’ ಮಾಡಿದ್ದು, ಅದರಿಂದ ಪ್ರೇರಣೆ ಪಡೆದು ವಿನಾಶದಂಚಿನಲ್ಲಿರುವ 64 ವರ್ಷಗಳಿಗೊಮ್ಮೆ ಹೂಬಿಟ್ಟು ಕಾಯಿಗಳಾಗಿ ಧರೆಗುರುಳುವ ಶ್ರೀತಾಳೆ ಗಿಡಗಳನ್ನು ಒಂದು ಲಕ್ಷಕ್ಕೂ ಮಿಗಿಲಾಗಿ ಕಾವೇರಿಯಿಂದ ವಾರಣಾಸಿ ತನಕ, ಶ್ರೀಲಂಕಾದ ವರೆಗೂ ಪ್ರಸಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾಡು ಶ್ರೀತಾಳೆಯ ಗರಿಗಳಿಂದ ನಿರ್ಮಿತ ಐದು ‘ಗೊರಬು’ಗಳನ್ನು ಅತಿಥಿಗಳಿಗೆ ನೀಡುವ ಮೂಲಕ ಸ್ವಾಗತಿಸಲಾಯಿತು. ನಾರು ಬೇರಿನಿಂದ ತಯಾರಿಸಿದ ‘ಕಿರು ಕಣಜ’ದಲ್ಲಿ ಶ್ರೀತಾಳೆ ಬೀಜಗಳು ಇರಿಸಿ ಪಾವನ ಸಾನ್ನಿಧ್ಯ ಸ್ವಾಮೀಜಿಗಳಿಗೆ ಅರ್ಪಿಸಲಾಯಿತು.ಇದೇ ಸಂದರ್ಭ ನಾಡವೈದ್ಯ ಅನಂತಾಡಿಯ ಗಂಗಾಧರ ಕರಿಯ ಪಂಡಿತ ಹಾಗೂ ಉಡುಪಿ ಕಟಪಾಡಿಯ ಪ್ರಾಚ್ಯ ವೈದ್ಯ ಸತೀಶ್ ಮುದ್ದು ಶೆಟ್ಟಿಗಾರ್ ಅವರನ್ನು ನಗದು, ‘ಪ್ರಾಚ್ಯ ಪಚ್ಚೆವನಸಿರಿ ವೈದ್ಯರತ್ನ’ ಬಿರುದಿನೊಂದಿಗೆ ಗೌರವಿಸಲಾಯಿತು.ಕಾರ್ಯಕ್ರಮವನ್ನು ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಸೌಮ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗಂಗಾಧರ ಕಿದಿಯೂರು, ಯುವರಾಜ್ ಜೈನ್ ಬೆಳುವಾಯಿ, ಪ್ರವೀಣ್ ಚಂದ್ರ ಉಪಸ್ಥಿತರಿದ್ದರು.