)
ಉಡುಪಿ: ಪರ್ಯಾಯ ಮಹೋತ್ಸವದ ಮೆರವಣಿಗೆಗೆ ಕೇಸರಿ ಧ್ವಜ ಬೀಸಿ ಚಾಲನೆ ನೀಡಿದ್ದಾರೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಕಾಂಗ್ರೆಸ್ ನಾಯಕರ ಕ್ರಮ ಖಂಡನೀಯ ಎಂದು ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ತಿಳಿಸಿದ್ದಾರೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೇ ಉಸ್ತುವಾರಿಯಾಗಿರುವ ಉಡುಪಿ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷ ಈ ರೀತಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಮುಂದಾದರೆ ಇತರ ಜಿಲ್ಲೆಗಳ ಮಹಿಳಾ ಅಧಿಕಾರಿಗಳ ಅಸಹಾಯಕತೆ ಎಷ್ಟಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉಡುಪಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ನಗರದ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಕಳೆದ ಎರಡು ಪರ್ಯಾಯ ಮಹೋತ್ಸವದ ಅವಧಿಯಲ್ಲೂ ಬಿಡಿಗಾಸು ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ, ತಮ್ಮ ವೈಫಲ್ಯವನ್ನು ಮರೆಮಾಚಲು ಕೇಸರಿ ಧ್ವಜ ವಿವಾದವನ್ನು ಸೃಷ್ಟಿಸಿ ಜಿಲ್ಲಾಧಿಕಾರಿಗಳನ್ನು ಟಾರ್ಗೆಟ್ ಮಾಡಲು ಮುಂದಾಗಿರುವುದು ನಾಚಿಕೆಗೇಡು ಎಂದು ಅವರು ತಿಳಿಸಿದ್ದಾರೆ.