ಉಡುಪಿ ಎಸ್‌ಐಆರ್: ಕರಡು ಪಟ್ಟಿ ಬಿಡುಗಡೆ

KannadaprabhaNewsNetwork |  
Published : Aug 25, 2026, 03:00 AM IST
ಡಿಸಿ ಸ್ವರೂಪ ಮತ್ತು ಎಡಿಸಿ ಅಬಿದ್ ಗದ್ಯಾಳ್ ರಾಜಕೀಯ ಪಕ್ಷಗಳಿಗೆ ಕರಡು ಮತದಾರರ ಪಟ್ಟಿಯನ್ನು ಹಸ್ತಾಂತರಿಸಿದರು  | Kannada Prabha

ಸಾರಾಂಶ

ಭಾರತೀಯ ಚುನಾವಣಾ ಆಯೋಗದ ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ ಕೈಗೊಳ್ಳಲಾಗಿದ್ದು, ಸೋಮವಾರ ಕರಡು ಪಟ್ಟಿ ಪ್ರಕಟಿಸಲಾಗಿದೆ.

ಉಡುಪಿ: ಭಾರತೀಯ ಚುನಾವಣಾ ಆಯೋಗದ ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ ಕೈಗೊಳ್ಳಲಾಗಿದ್ದು, ಸೋಮವಾರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ 10,00,545 ಮಂದಿ (4,84,137 ಪುರುಷ ಮತ್ತು 516399 ಮಹಿಳಾ) ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

63331 ಎಎಸ್‌ಡಿಡಿಒ: ಜಿಲ್ಲೆಯಲ್ಲಿ ಜೂ. 16ರವರೆಗೆ ಮತದಾರರ ಪಟ್ಟಿಯಲ್ಲಿ ಒಟ್ಟು 5,13,368 ಪುರುಷ ಮತ್ತು 5,50,498 ಮಹಿಳಾ ಮತದಾರರಿದ್ದರು. ಪರಿಷ್ಕರಣೆ ಸಂದರ್ಭ ಜಿಲ್ಲೆಯಲ್ಲಿ ಒಟ್ಟು 63331 ಮತದಾರರನ್ನು ಎಎಸ್‌ಡಿಡಿಒ (ಗೈರು, ಸ್ಥಳಾಂತರ, ಮೃತ, ನಕಲಿ ಮತ್ತು ಇತರ) ಪತ್ತೆಯಾಗಿದ್ದು, ಅವರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ.

189 ಮಂದಿ ನಿರಾಕರಣೆ: ಜಿಲ್ಲೆಯಲ್ಲಿ ಸುಮಾರು 189 ಮಂದಿ ಮತದಾರರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ತಿರಸ್ಕರಿಸಿ ತಮ್ಮ ವಿವರಗಳನ್ನು ನೀಡಲು ನಿರಾಕರಿಸಿದ್ದು, ಅವರನ್ನೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

132 ಹೊಸ ಮತಗಟ್ಟೆಗಳು: 5914 ಮಂದಿ ಯುವ (ಹೊಸ) ಮತದಾರರು ವಿಶೇಷ ಸಮಗ್ರ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಸರಾಸರಿ 1200 ಮತದಾರರಂತೆ ಮತಗಟ್ಟೆಗಳನ್ನು ರಚಿಸಲಾಗಿದ್ದು, ಹಿಂದಿದ್ದ 1112 ಮತದಾನ ಕೇಂದ್ರಗಳಿಗೆ 132 ಹೊಸ ಮತದಾನ ಕೇಂದ್ರಗಳು ಸೇರಿದ್ದು, ಒಟ್ಟು ಜಿಲ್ಲೆಯಲ್ಲಿಗ 1244 ಮತದಾನ ಕೇಂದ್ರಗಳಿವೆ.

97706 ಲಿಂಕೇಜ್ ವ್ಯತ್ಯಾಸ: ಹಿಂದಿನ ಮತದಾರರ ಪಟ್ಟಿಯೊಂದಿಗೆ ಲಿಂಕೇಜ್ ಆಗದಿರುವ 31,903 ಮತ್ತು ತಾಂತ್ರಿಕ ವ್ಯತ್ಯಾಸಗಳಿರುವ 65803 ಸೇರಿ 97706 ಪ್ರಕರಣಗಳಿದ್ದು, ಅವರಿಗೆ ನೋಟಿಸ್‌ ನೀಡಲಾಗುತ್ತದೆ. ಅವರಲ್ಲಿ ವಲಸೆ ಕಾರ್ಮಿಕರೇ ಹೆಚ್ಚಿದ್ದಾರೆ. ಈ ಪ್ರಕರಣಗಳ ವಿಚಾರಣೆಗೆ 120 ಹೆಚ್ಚುವರಿ ಮತದಾರ ನೊಂದಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಗ್ರಾಪಂನ ಹೆಚ್ಚುವರಿ ಮತದಾರ ನೋಂದಣಾಧಿಕಾರಿಗಳ ಮುಂದೆ ಹಾಜರಾಗಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಮತದಾರರಿಗೆ ಸೂಚನೆಗಳು: ಪ್ರತಿಯೊಬ್ಬ ಮತದಾರರು ಕರಡುಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು, ಇತರ ವಿವರಗಳು ತಪ್ಪಿದ್ದಲ್ಲಿ ಸೆ.23ರೊಳಗೆ ನಮೂನೆ 8ರಲ್ಲಿ ತಿದ್ದುಪಡಿ ಅರ್ಜಿ ಸಲ್ಲಿಸಬೇಕು. ಹೊಸ ಮತದಾರರು ನಮೂನೆ 6ರಲ್ಲಿ ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು. ಎಎಸ್‌ಡಿಡಿಒ ಮತದಾರರ ಬಗ್ಗೆ ನಮೂನೆ 7 ಮಾಹಿತಿ ನೀಡಬೇಕು. ಅ. 22ರೊಳಗೆ ಎಲ್ಲ ಅರ್ಜಿಗಳ ವಿಲೇವಾರಿ, ಪ್ರಕರಣಗಳ ವಿಚಾರಣೆ ಮುಗಿಸಿ, ಅ. 27ರಂದು ಅಂತಿಮ ನಿಖರ ಮತ್ತು ಶುದ್ಧ ಮತದಾರರ ಪಟ್ಟಿ ಪ್ರಕಟಿಸಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವೋದಯ ಸಹಕಾರ ಸಂಘ: ಶೇ.9 ಡಿವಿಡೆಂಡ್ ಘೋಷಣೆ
ಭಾಗಮಂಡಲ ವಲಯ ಪ್ರೌಢಶಾಲೆ ವಿಭಾಗ ಕ್ರೀಡಾಕೂಟ