ಉಡುಪಿ: ಬಿಪಿಎಲ್ ಕಾರ್ಡ್‌ ರದ್ದಾಗುವ ಆತಂಕ ಸದ್ಯಕ್ಕಿಲ್ಲ!

KannadaprabhaNewsNetwork |  
Published : Nov 26, 2024, 12:49 AM IST
25ಆದೇಶ | Kannada Prabha

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಒಟ್ಟು 3,11,899 ಪಡಿತರ ಕಾರ್ಡುಗಳಿವೆ, ಇವುಗಳಲ್ಲಿ ಅಂತ್ಯೋದಯ 27,953, ಬಿಪಿಎಲ್ 1,68,447 ಮತ್ತು ಎಪಿಎಲ್ 1,15,499 ಕಾರ್ಡುಗಳಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸಾವಿರಾರು ಮಂದಿಯ ತಮ್ಮ ಪಡಿತರ ಕಾರ್ಡು ರದ್ದಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೇವೆ ಎಂಬ ಆತಂಕ ಸದ್ಯಕ್ಕೆ ದೂರವಾಗಿದೆ. ರಾಜ್ಯ ಸರ್ಕಾರ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು, ಬಿಪಿಎಲ್‌ ಪಡಿತರ ಕಾರ್ಡುಗಳ ಪರಿಶೀಲನೆ ಮತ್ತು ಅನರ್ಹರ ಕಾರ್ಡುಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 3,11,899 ಪಡಿತರ ಕಾರ್ಡುಗಳಿವೆ, ಇವುಗಳಲ್ಲಿ ಅಂತ್ಯೋದಯ 27,953, ಬಿಪಿಎಲ್ 1,68,447 ಮತ್ತು ಎಪಿಎಲ್ 1,15,499 ಕಾರ್ಡುಗಳಿವೆ.ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರವು ಉಡುಪಿ ಜಿಲ್ಲೆಯಲ್ಲಿ 6 ತಿಂಗಳಿಂದ ಪಡಿತರ ಪಡೆಯದ, ಆದಾಯ ತೆರಿಗೆ ಪಾವತಿಸಿದ, ಸರ್ಕಾರಿ ನೌಕರರ ಮತ್ತು 1.2 ಲಕ್ಷ ರು.ಗಿಂತ ಹೆಚ್ಚು ಆದಾಯವಿರುವ ಕುಟುಂಬಗಳ ಸುಮಾರು 36,000 ಬಿಪಿಎಲ್ ಪಡಿತರ ಕಾರ್ಡುಗಳನ್ನು ಪರಿಶೀಲನೆ ಮಾಡಿ, ಅದರಲ್ಲಿ ಬಿಪಿಎಲ್‌ ಎಂದು ಸುಳ್ಳು ಹೇಳಿದವರ ಭೋಗಸ್ ಅಥವಾ ಅನರ್ಹ ಕಾರ್ಡುಗಳಿದ್ದರೆ ಅವುಗಳನ್ನು ರದ್ದುಗೊಳಿಸುವಂತೆ ಆದೇಶಿಸಿತ್ತು.

ಅದರಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಅವುಗಳಲ್ಲಿ ಸುಮಾರು 2000ರಷ್ಟು ಅನರ್ಹ ಕಾರ್ಡುಗಳನ್ನು ರದ್ದುಗೊಳಿಸಲು ಗುರುತಿಸಿದ್ದರು.

ಆದರೆ ಇದೀಗ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿದೆ. ಸರ್ಕಾರಿ ನೌಕರರ ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತು ಪಡಿಸಿ ಉಳಿದ ಯಾರೊಬ್ಬರ ಪಡಿತರ ಕಾರ್ಡುಗಳನ್ನು ರದ್ದು ಮಾಡದಂತೆ ಹೊಸದಾಗಿ ಆದೇಶಿಸಿದೆ. ಇದರಿಂದ ಜಿಲ್ಲೆಯಲ್ಲಿ 600ರಷ್ಟು ಸರ್ಕಾರಿ ನೌಕರರ ಮತ್ತು ಆದಾಯ ತೆರಿಗೆದಾರರ ಪಡಿತರ ಕಾರ್ಡುಗಳನ್ನು ಹೊರತು ಪಡಿಸಿ, ಇತರ 1400 ಕುಟುಂಬಗಳ ತಲೆ ಮೇಲೆ ತೂಗುತ್ತಿದ್ದ ಬಿಪಿಎಲ್‌ ಕಾರ್ಡು ರದ್ದು ಎಂಬ ತೂಗುಗತ್ತಿ ಸದ್ಯಕ್ಕೆ ತಪ್ಪಿದೆ.-----------

666 ಕಾರ್ಡುಗಳು ರದ್ದಾಗಿವೆ

ಜಿಲ್ಲೆಯಲ್ಲಿ ಜುಲೈನಿಂದ 54 ಮೃತಪಟ್ಟ ಏಕಸದಸ್ಯ ಪಡಿತರ ಕಾರ್ಡು, 404 ಆದಾಯ ತೆರಿಗೆ ಪಾವತಿಸುವವರ ಕಾರ್ಡು ಮತ್ತು 1.2 ಲಕ್ಷ ರು.ಗಿಂತ ಹೆಚ್ಚು ಆದಾಯವಿರುವ 208 ಕುಟುಂಬಗಳ ಕಾರ್ಡುಗಳು ಸೇರಿ ಒಟ್ಟು 666 ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ರವೀಂದ್ರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೈಬ್ರರಿ ಮೇಲ್ವಿಚಾರಕರಿಗೆ ವರ್ಷದಿಂದ ಅರ್ಧ ವೇತನ!
ಕುರಿಗಾಹಿ ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು : ಸಿದ್ದು ಕಿಡಿ