ಉಡುಪಿ ತೊಟ್ಟಂ ಚರ್ಚ್ ಬಡ ಕುಟುಂಬಕ್ಕೆ ಮನೆ ಉಚಿತ ನಿರ್ಮಾಣಕ್ಕೆ ಚಾಲನೆ

KannadaprabhaNewsNetwork | Published : Dec 16, 2024 12:49 AM

ಸಾರಾಂಶ

ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಸಾಮಾನ್ಯ ಜುಬಿಲಿ ವರ್ಷದ ಅಂಗವಾಗಿ ಸ್ವಂತ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸುವ ವಿಶೇಷ ಯೋಜನೆಯಂಗವಾಗಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಚರ್ಚ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಕಾರ್ಯದ ಭೂಮಿ ಪೂಜೆಯ ಅಡಿಗಲ್ಲು ಆಶೀರ್ವಚನ ಕಾರ್ಯ ಜರುಗಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಸಾಮಾನ್ಯ ಜುಬಿಲಿ ವರ್ಷದ ಅಂಗವಾಗಿ ಸ್ವಂತ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸುವ ವಿಶೇಷ ಯೋಜನೆಯಂಗವಾಗಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಚರ್ಚ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಕಾರ್ಯದ ಭೂಮಿ ಪೂಜೆಯ ಅಡಿಗಲ್ಲು ಆಶೀರ್ವಚನ ಕಾರ್ಯ ಜರುಗಿತು.

ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಫ್ರಾನ್ಸಿಸ್ ಸೆರಾವೊ ಮನೆ ನಿರ್ಮಾಣ ಅಡಿಗಲ್ಲು ಆಶೀರ್ವಚನ ನೆರವೇರಿಸಿದರು.

ಅವರು ಮಾತನಾಡಿ, ಪ್ರತಿಯೊಂದು ದಾನವೂ ದೇವರಿಗೆ ಪ್ರಿಯವಾದುದಾಗಿದೆ. ತೊಟ್ಟಂ ಅನ್ನಮ್ಮ ದೇವಾಲಯದಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಮಾದರಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ನಮ್ಮ ಪೂರ್ವಜರು ಒಂದೇ ಕುಟುಂಬವೆಂಬಂತೆ ಬದುಕಿ ಬಾಳಿದವರಾಗಿದ್ದು ಅದೇ ಸಂದೇಶವನ್ನು ಇಂದು ತನ್ನ ಸಮುದಾಯದ ಒರ್ವ ಅಶಕ್ತ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ಸಾರಲಾಗಿದೆ ಎಂದರು.

ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಜುಬಿಲಿ ವರ್ಷಾಚರಣೆ ನಿಟ್ಟಿನಲ್ಲಿ ಧರ್ಮಾಧ್ಯಕ್ಷರು ಹೊಸ ಯೋಜನೆ ನೀಡಿದ್ದಾರೆ. ಧರ್ಮಪ್ರಾಂತ್ಯದಲ್ಲಿ 52 ಚರ್ಚುಗಳಿಂದ್ದು ಪ್ರತಿಯೊಂದು ಚರ್ಚಿನಲ್ಲಿ ಮನೆ ಇಲ್ಲದ ಒಬ್ಬರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅದರಂತೆ ತೊಟ್ಟಂ ಚರ್ಚಿನಿಂದ 12 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಇಲ್ಲಿನ ಥೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿ ಮನೆ ನಿರ್ಮಾಣಕ್ಕೆ ತಮ್ಮ ಜಮೀನಲ್ಲಿ 5 ಸೆಂಟ್ಸ್ ಜಾಗವನ್ನು ಉಚಿತವಾಗಿ ನೀಡಿದ್ದು ಅದರಲ್ಲಿ ಓರ್ವ ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ನಿರ್ಧರಿಸಿಲಾಗಿದೆ. ಇಂದು ಮನೆಯ ಅಡಿಗಲ್ಲನ್ನು ಆಶೀರ್ವಚನ ಮಾಡಿದ್ದು, ಕ್ರಿಸ್ಮಸ್ ದಿನದಂದು ಮನೆಯ ಶಂಕುಸ್ಥಾಪನೆ ಕಾರ್ಯ ನೆರವೇರಲಿದೆ ಎಂದರು.

ಮನೆ ನಿರ್ಮಾಣಕ್ಕೆ 5 ಸೆಂಟ್ಸ್ ಜಾಗ ಉಚಿತವಾಗಿ ನೀಡಿರುವ ತೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿಗಳನ್ನು ಧರ್ಮಾಧ್ಯಕ್ಷರು ಚರ್ಚಿನ ಪರವಾಗಿ ಸನ್ಮಾನಿಸಿದರು.

ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್ ಮತ್ತಿತರರಿದ್ದರು.

Share this article