ಒಡೆಯರ ಪಾಳ್ಯ ಗ್ರಾಮದಲ್ಲಿ ರಕ್ತದಾನ ಶಿಬಿರ । ಯುವಕರಿಂದ ರಕ್ತದಾನ
ತಾಲೂಕಿನ ಕಾಡಂಚಿನ ಗ್ರಾಮಗಳ ಆರೋಗ್ಯದ ಹಿತ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಚಾಮುಲ್ ನಿರ್ದೇಶಕ ಮಹದೇವ ಪ್ರಸಾದ್ (ಉದ್ದನೂರು ಪ್ರಸಾದ್) ತಿಳಿಸಿದರು.
ತಾಲೂಕಿನ ಒಡೆಯರ ಪಾಳ್ಯ ಗ್ರಾಮದಲ್ಲಿ ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ಹುತ್ತೂರು ಗ್ರಾಮ ಪಂಚಾಯಿತಿ, ಬಸವರಾಜೇಂದ್ರ ಆಸ್ಪತ್ರೆ ಮತ್ತು ರಕ್ತ ನಿಧಿ ಕೇಂದ್ರ ಮರಿಯಾಲ, ಲಯನ್ಸ್ ಕ್ಲಬ್ ಚಾಮರಾಜನಗರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ಮಹಿಳಾ ಜಿಲ್ಲಾ ಘಟಕ, ಶಿವ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಮನುಷ್ಯ ಪ್ರತಿ ದಿನ ಒಂದಲ್ಲ ಒಂದು ಒತ್ತಡಗಳಿಂದ ರಕ್ತದ ಒತ್ತಡ ಮಧುಮೇಹದಿಂದ ಬಳಲುತ್ತಿದ್ದಾರೆ. ಕೆಲಸದ ಒತ್ತಡದಿಂದ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಡಂಚಿನ ಆದಿವಾಸಿಗಳು, ಅಸಹಾಯಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ ಯೋಜನೆ ಮಾಡಲಾಗಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ತಮಗಾಗಿ ಆಸ್ತಿ ಸಂಪಾದನೆ ಮಾಡದಿದ್ದರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಯುವ ಮುಖಂಡ ಪ್ರಶಾಂತ್ ಸೇರಿ ಇತರರು ರಕ್ತದಾನ ಮಾಡಿದರು.
ಬಸವ ರಾಜೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಸವರಾಜೇಂದ್ರ, ಡಾ. ಶ್ವೇತಾ, ಅಖಿಲ ಭಾರತ ವೀರಶೈವ ಮಹಾ ಘಟಕದ ತಾಲೂಕು ನಿರ್ದೇಶಕರಾದ ವಿನೋದ್, ಮುರುಡೇಶ್ವರ ಸ್ವಾಮಿ, ಕಣ್ಣೂರು ಬಸವರಾಜಪ್ಪ ನಾಗೇಂದ್ರ ಮೂರ್ತಿ, ನಾಗೇಂದ್ರ, ಜಗದೀಶ್ ಗ್ರಾಪಂ ಸದಸ್ಯ ಪುಟ್ಟುವೀರ ನಾಯ್ಕ ಸೇರಿ ಇತರರು ಹಾಜರಿದ್ದರು.