ಉಡುಪಿ: ಪೋಷಕರಿಂದ ಮೂರು ಮಕ್ಕಳ ದತ್ತು ಸ್ವೀಕಾರ

KannadaprabhaNewsNetwork |  
Published : Apr 13, 2026, 02:30 AM IST
ಬಂಧನ | Kannada Prabha

ಸಾರಾಂಶ

ಉಡುಪಿಯ ಶ್ರೀ ಕೃಷ್ಣಾನುಗ್ರಹ ಕೇಂದ್ರದ ಆಶ್ರಯದಲ್ಲಿದ್ದ 3 ಮಂದಿ ಅನಾಥ ಮಕ್ಕಳನ್ನು ದತ್ತು ಸ್ವೀಕರಿಸಲು ಮುಂದೆ ಬಂದ ಪೋಷಕರಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ದತ್ತು ನೀಡಿದರು.

ಉಡುಪಿ: ಉಡುಪಿಯ ಶ್ರೀ ಕೃಷ್ಣಾನುಗ್ರಹ ಕೇಂದ್ರದ ಆಶ್ರಯದಲ್ಲಿದ್ದ 3 ಮಂದಿ ಅನಾಥ ಮಕ್ಕಳನ್ನು ದತ್ತು ಸ್ವೀಕರಿಸಲು ಮುಂದೆ ಬಂದ ಪೋಷಕರಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ದತ್ತು ನೀಡಿದರು.ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯ್ದೆ 2021 ರ ಸೆಕ್ಷನ್ 56(1), 58 ಮತ್ತು 61 ರ ಅಡಿಯಲ್ಲಿ, ಈ ಮಕ್ಕಳನ್ನು ಬೆಂಗಳೂರು, ತೆಲಂಗಾಣ ಹಾಗೂ ಉಡುಪಿ ಜಿಲ್ಲೆಯ ದಂಪತಿಗಳಿಗೆ ಅಂತಿಮ ದತ್ತು ಆದೇಶವನ್ನು ಹಸ್ತಾಂತರಿಸುವ ಮೂಲಕ ದತ್ತು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಆದ್ದರಿಂದ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆಯು ಮಗುವಿಗೆ ಅವಶ್ಯವಿರುವ ಕೌಟುಂಬಿಕಾ ವಾತಾವರಣ, ಪ್ರೀತಿ ಮತ್ತು ಆರೈಕೆಯನ್ನು ಒದಗಿಸುತ್ತದೆ ಎಂದರು.ಪೋಷಕರನ್ನು ಕಳೆದುಕೊಂಡ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಮಾತ್ರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ನೀಡಲು ಅರ್ಹರಾಗಿರುತ್ತಾರೆ. ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧ ಪ್ರಕ್ರಿಯೆ ಮೂಲಕ ದತ್ತು ಪಡೆಯಬೇಕು. ಕಾನೂನು ಉಲ್ಲಂಘಿಸಿ ದತ್ತು ಸ್ವೀಕರಿಸಿದರೇ ಅಥವಾ ದತ್ತು ನೀಡಿದರೇ ಅಥವಾ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಶಾಮಿಲಾದರೆ 1 ಲಕ್ಷ ರು. ದಂಡ ಹಾಗೂ ಕನಿಷ್ಠ 5 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ರಕ್ಷಣಾಧಿಕಾರಿಗಳಾದ ಸುರಕ್ಷಾ ಹಾಗೂ ಮಹೇಶ್ ದೇವಾಡಿಗ, ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರದ ವೃಂದಾ ಉಪಸ್ಥಿತರಿದ್ದರು.ದತ್ತು ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ (0820-2574964) ಅಥವಾ ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರ (9880442640)ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.ಮಮತೆಯ ತೊಟ್ಟಿಲುಗಳಿವೆ: ಯಾವುದೇ ಕಾರಣಕ್ಕೆ ಹೆತ್ತವರಿಗೆ ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಅಥವಾ ಪೊದೆ ಇತ್ಯಾದಿಗಳಲ್ಲಿ ಎಸೆಯದೇ, ಅಂತಹ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬೇಕು, ಉಡುಪಿಯ ಸಂತೆಕಟ್ಟೆಯ ಶ್ರೀ ಕೃಷ್ಣಾನುಗ್ರಹ ದತ್ತು ಕೇಂದ್ರ ಹಾಗೂ ನಗರದ ಬಿ.ಆರ್. ಶೆಟ್ಟಿ ಆಸ್ಪತ್ರೆಯಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು
ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡಿ