ಉಡುಪಿ: ಮಕರ ಸಂಕ್ರಮಣದ ಮೂರು ತೇರು ಉತ್ಸವ ಸಂಪನ್ನ

KannadaprabhaNewsNetwork | Published : Jan 15, 2025 12:48 AM

ಸಾರಾಂಶ

ಉಡುಪಿಯಲ್ಲಿ ಜಗದ್ಗುರು ಮಧ್ವಾಚಾರ್ಯರು ಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನ, ಸಪ್ತೋತ್ಸವದ ಕೊನೆಯ ದಿನ, ಮಂಗಳವಾರ ರಾತ್ರಿ, ಮಕರ ಸಂಕ್ರಮಣದ ಪ್ರಯುಕ್ತ ರಥಬೀದಿಯಲ್ಲಿ ಮೂರು ತೇರು ಉತ್ಸವ ವೈಭವದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯಲ್ಲಿ ಜಗದ್ಗುರು ಮಧ್ವಾಚಾರ್ಯರು ಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನ, ಸಪ್ತೋತ್ಸವದ ಕೊನೆಯ ದಿನ, ಮಂಗಳವಾರ ರಾತ್ರಿ, ಮಕರ ಸಂಕ್ರಮಣದ ಪ್ರಯುಕ್ತ ರಥಬೀದಿಯಲ್ಲಿ ಮೂರು ತೇರು ಉತ್ಸವ ವೈಭವದಿಂದ ನಡೆಯಿತು.

ಇದಕ್ಕೆ ಪೂರ್ವಭಾವಿಯಾಗಿ ಮಧ್ಯಾಹ್ನ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ರಥಕ್ಕೆ ಶಿಖರಾರೋಹಣ ನಡೆಯಿತು. ರಥದ ಶಿಖರದಲ್ಲಿರುವ ಕಲಶಕ್ಕೆ ಪೂಜೆ ಸಲ್ಲಿಸಿ, ನಂತರ ರಥದ ತುದಿಗೆ ಅಳವಡಿಸಲಾಯಿತು.

ರಾತ್ರಿ ಸುಮಾರು 7 ಗಂಟೆಗೆ ರಥಕ್ಕೆ ದೇವರನ್ನು ಆರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಮಳೆಯಾಗಿ ರಥಬೀದಿ ತಂಪಾಯಿತು. ಕೆಲಕಾಲ ಸುರಿದ ಮಳೆಯ ನಡುವೆಯೂ ನೂರಾರು ಮಂದಿ ಭಕ್ತರು ಮೂರು ರಥಗಳನ್ನು ಎಳೆದು ಸಂಭ್ರಮಿಸಿದರು. ಅನಿರೀಕ್ಷಿತ ಮಳೆ ರಥೋತ್ಸವದ ಉತ್ಸಾಹಕ್ಕೆ ಸ್ವಲ್ಪಮಟ್ಟಿನ ತಣ್ಣೀರೆರೆಚಿತು.

ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಆಸ್ಟ್ರೇಲಿಯದ ಸಂಸದ ಜಾನ್ ಮುಲ್ಲಾಯ್ ಈ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಸಂಜೆ ಗೀತಾಮಂದಿರದಲ್ಲಿ ಪರ್ಯಾಯ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ವಿಶ್ವಗೀತಾ ಕ್ವಿಜ್‌ ಸ್ಪರ್ಧೆಯ ಕಚೇರಿ - ಕೃಷ್ಣಗೀತಾನುಭವ ಮಂಟಪವನ್ನು ಆಸ್ಟ್ರೇಲಿಯದ ಸಂಸದ ಜಾನ್ ಮುಲ್ಲಾಯ್ ಉದ್ಘಾಟಿಸಿದರು. ಮಠದ ದಿವಾನಾರದ ನಾಗರಾಜ್ ಆಚಾರ್ಯ ಮತ್ತು ಶ್ರೀಗಳ ಅಂತಾರಾಷ್ಚ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.

ನಂತರ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಾನ್ ಮುಲ್ಲಾಯ್ ಅವರನ್ನು ಶ್ರೀಗಳು ಸನ್ಮಾನಿಸಿದರು. ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ, ನವದೆಹಲಿಯ ಸಿಬಿಎಸ್‌ಸಿ ಎಫಿಲಿಯೇಶನ್ ಯೂನಿಟ್‌ನ ಅಧ್ಯಕ್ಷ ಜಯಪ್ರಕಾಶ್ ಚತುರ್ವೇದಿ, ಶ್ರೀ ಮಠದ ವಿಶೇಷ ಭಕ್ತರಾದ ಆಸ್ಟ್ರೇಲಿಯಾದ ರಮೇಶ್‌ ಮತ್ತು ಅಶ್ವಿನ್‌ ವೇದಿಕೆಯಲ್ಲಿದ್ದರು. ವಿದ್ವಾಂಸರಾದ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.

Share this article