ಉಡುಪಿ: ‘ಗೀತಾಮೃತಸಾರ’ ಮರುಮುದ್ರಿತ ಕೃತಿ ಅನಾವರಣ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಶ್ರೀ ಸುಜ್ಞಾನೇಂದ್ರತೀರ್ಥರ ಪೂರ್ವಾಶ್ರಮದ ಬಂಧು, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ. ಬೀ. ವಿಜಯ ಬಲ್ಲಾಳ್ ಅವರಿಗೆ ‘ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ತಮ್ಮ ಗುರುಗಳಾದ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರು ಬರೆದ ಆಚಾರ್ಯ ಮಧ್ವರ ಗೀತಾ ಭಾಷ್ಯವನ್ನಾಧರಿಸಿ 1961ರಲ್ಲಿ ಪ್ರಕಟವಾಗಿದ್ದ ಅಪೂರ್ವ ಕೃತಿ ‘ಗೀತಾಮೃತಸಾರ’ದ ಮರುಮುದ್ರಿತ ಕೃತಿಯನ್ನು ಮಂಗಳವಾರ ಅನಾವರಣಗೊಳಿಸಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರ ಜ್ಞಾನ ಭಂಡಾರ, ಅಧ್ಯಯನ, ಆಯುರ್ವೇದದ ಬಗ್ಗೆ ಅವರು ಹೊಂದಿದ್ದ ಜ್ಞಾನದ ಬಗ್ಗೆ ಸ್ಮರಿಸಿದರು.

ಶ್ರೀ ಸುಜ್ಞಾನೇಂದ್ರತೀರ್ಥರ ಪೂರ್ವಾಶ್ರಮದ ಬಂಧು, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ. ಬೀ. ವಿಜಯ ಬಲ್ಲಾಳ್ ಅವರಿಗೆ ‘ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಿದರು.ವೈದ್ಯನಾಗಿ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಶುಶ್ರೂಷೆ ಮಾಡುವ ಅವಕಾಶ ಪಡೆದಿದ್ದುದನ್ನು ಸ್ಮರಿಸಿದ ಡಾ. ಬಲ್ಲಾಳ್, ಆ ಸಂದರ್ಭದಲ್ಲಿ ಶ್ರೀಗಳು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದರು ಎಂದರು.

ಅನೇಕ ವಿದ್ಯಾರ್ಥಿಗಳಿಗೆ ಗೀತಾಪಾಠ ನಡೆಸಿದ ಡಾ. ರಾಮಕೃಷ್ಣ ರಾಮಚಂದ್ರ ಸೂರಿ ಅವರಿಗೆ ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಲಾಯಿತು‌. ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರ ಪೂರ್ವಾಶ್ರಮದ ವಂಶಸ್ಥರಾದ ಹೆಜಮಾಡಿ ಸುಧೀಂದ್ರ ಆಚಾರ್ಯ ಉಪನ್ಯಾಸ ನೀಡಿದರು. ಪುಸ್ತಕದ ಸಂಪಾದನೆ ಮಾಡಿದ ಓಂಪ್ರಕಾಶ ಭಟ್ ಕೃತಿ ಹಾಗೂ ಕೃತಿಕಾರರ ಬಗ್ಗೆ ವಿವರಿಸಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮಠದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು. ಶ್ರೀಮಠದ ಮಹಿತೋಷ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.‌

Share this article