ಜೋಶ್ ಇರುವ ಸಾಹಸ ಮಾಡುವ ಕೆಲಸ ಮಾಡಬೇಕೆಂದೇ ಸೈನ್ಯಕ್ಕೆ ಸೇರಿದೆ: ಸೀಮಾ ತೆಂಡುಲ್ಕರ್
ಕನ್ನಡಪ್ರಭ ವಾರ್ತೆ ಉಡುಪಿ ಹಿಂದೆ ಹೆಚ್ಚು ವಿದ್ಯಾವಂತರಿರುವ ಕರಾವಳಿಯಿಂದ ಭಾರತೀಯ ಸೈನ್ಯಕ್ಕೆ ಸೇರುವವರ ಸಂಖ್ಯೆ ಬಹಳ ಕಡಿಮೆ ಇತ್ತು, ಆದರೆ ಇಂದು ಉನ್ನತ ಶಿಕ್ಷಣ ಪಡೆದ ಇಲ್ಲಿನ ಯುವಕ ಯುವತಿಯರು ಸೈನ್ಯಕ್ಕೆ ಸೇರುವ ಆಸಕ್ತಿ ತೋರಿಸುತಿದ್ದಾರೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರತಿಭೆ ಸೀಮಾ ತೆಂಡುಲ್ಕರ್ ಭಾರತೀಯ ನೌಕಾ ಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದು ಸೋಮವಾರದಿಂದ ಕೇರಳದಲ್ಲಿ ತರಬೇತಿ ಪಡೆಯಲಿದ್ದಾರೆ.
ಉಡುಪಿ ಜಿಲ್ಲೆಯ ಪೆರ್ಣಂಕಿಲ ಎಂಬ ಕುಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಸೀಮಾ ತೆಂಡುಲ್ಕರ್ ಪ್ರತಿಭಾವಂತೆ, ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿಧರೆ. ಎಸ್ಸೆಸ್ಸೆಲ್ಸಿ ತನಕ ಕನ್ನಡ ಮಾಧ್ಯಮದಲ್ಲೇ ಕಲಿತ ಈಕೆ ಪಿಯುಸಿ ವ್ಯಾಸಂಗವನ್ನು ಉಡುಪಿಯಲ್ಲೇ ಪೂರೈಸಿದರು. ಎಂಜಿನಿಯರಿಂಗ್ ಶಿಕ್ಷಣ ಬೆಂಗಳೂರಿನಲ್ಲಿ ಪಡೆದಿದ್ದಾರೆ. ತನ್ನ ಸಾಹಸಿ ಮನೋಭಾವಕ್ಕೆ ಅನುಗುಣವಾಗಿ ಆಕೆ ಭವಿಷ್ಯವನ್ನು ಹುಡುಕಿಕೊಂಡಿರುವುದು ದೇಶಸೇವೆಯಲ್ಲಿ.ಭಾರತೀಯ ನೌಕಾ ಸೇನೆಯಲ್ಲಿ ಅದರದ್ದೇ ಆದ ವಾಯುಪಡೆ ವಿಭಾಗವೂ ಇದೆ, ಅದರದ್ದೇ ಪೈಲಟ್‌ಗಳೂ ಇದ್ದಾರೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ 7 ಮಂದಿ ಮಹಿಳಾ ಪೈಲಟ್ ಗಳನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಸೀಮಾ ಕೂಡ ಒಬ್ಬರಾಗಿ ಆಯ್ಕೆಯಾಗಿದ್ದಾರೆ.
ಜೋಶ್ ಇರುವ ಕೆಲಸ ಮಾಡಬೇಕೆಂದು...
ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದಾಗ ಎನ್‌ಸಿಸಿ ಆರ್ಮಿ ಕೆಡೆಟ್ ಆಗಿದ್ದೆ, ಮುಂದೆ ಕೇವಲ ಇಂಜಿನಿಯರ್ ಆಗಿ ಉದ್ಯೋಗ ಪಡೆಯುವುದಕ್ಕಿಂತ ವಿಭಿನ್ನ ರಂಗದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದೆ, ದೇಶಸೇವೆಯ ಅವಕಾಶ, ಜೋಶ್ ಇರುವ, ದೈಹಿಕ ಸಾಹಸ ಇರುವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು ಎಂದುಕೊಂಡಿದ್ದೆ, ಅದಕ್ಕೆ ನೇವಿ ಸೇರಿದೆ ಎನ್ನುತ್ತಾರೆ ಭಾರತೀಯ ನೌಕಪಡೆಯ ಭಾವಿ ಪೈಲಟ್ ಸೀಮಾ ತೆಂಡುಲ್ಕರ್.