ಉಡುಪಿ: ಜಿಲ್ಲೆಯಲ್ಲಿ ಮೊದಲ ಮಳೆಗೆ ಮೊದಲ ಬಲಿ, 12 ಮನೆಗೆ ಹಾನಿ

KannadaprabhaNewsNetwork |  
Published : Apr 21, 2024, 02:16 AM IST
ಮರ20 | Kannada Prabha

ಸಾರಾಂಶ

ಮುಂಜಾನೆ 3 ಗಂಟೆಗೆ ಆರಂಭವಾದ ಮಳೆ ಸತತ 3 ಗಂಟೆಗಳ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ 40.30 ಮಿ.ಮೀ . ಮಳೆ ದಾಖಲಾಗಿದೆ. ಮೊದಲ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನಲ್ಲಿ 10 ಮನೆಗಳಿಗೆ ಮತ್ತು ಕಾರ್ಕಳ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲಾದ್ಯಂತ ಶನಿವಾರ ಮುಂಜಾನೆ ಉತ್ತಮ ಮಳೆಯಾಗಿದೆ. ಕಾರ್ಕಳದಲ್ಲಿ ಸಿಡಿಲಿಗೆ ಓರ್ವ ಬಲಿಯಾಗಿದ್ದು, ಮೊದಲ ಮಳೆಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ.

ಮುಂಜಾನೆ 3 ಗಂಟೆಗೆ ಆರಂಭವಾದ ಮಳೆ ಸತತ 3 ಗಂಟೆಗಳ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ 40.30 ಮಿ.ಮೀ . ಮಳೆ ದಾಖಲಾಗಿದೆ. ಮೊದಲ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನಲ್ಲಿ 10 ಮನೆಗಳಿಗೆ ಮತ್ತು ಕಾರ್ಕಳ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ.

ಮಳೆ ಆರಂಭವಾಗುತ್ತಲೇ ಕಾಪು, ಉಡುಪಿ, ಕುಂದಾಪುರ ಹಲವಾರು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಸುಮಾರು 25ಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ, ತಂತಿಗಳಿಗೆ, ಮನೆ ಸಂಪರ್ಕಗಳಿಗೆ ಹಾನಿಯಾಗಿದೆ.

ಮಳೆ ನಿಂತ ಮೇಲೆ ಉಡುಪಿ ನಗರದ ಹೃದಯಭಾಗದಲ್ಲಿರುವ ವಿಶ್ವೇಶ್ವರಯ್ಯ ತರಕಾರಿ ಮಾರುಕಟ್ಟೆಯ ಪಕ್ಕದಲ್ಲಿರುವ ಭಾರಿ ಗಾತ್ರದ ಮರವೊಂದರ ಗೆಲ್ಲು ಮುರಿದು ಹಣ್ಣುಹಂಪಲುಗಳ ಅಂಗಡಿಗಳ ಪಕ್ಕದಲ್ಲಿಯೇ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಗಾಯ ಹಾನಿ ಸಂಭವಿಸಿಲ್ಲ.

ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಭಾಸ್ಕರ್ ಗಾಣಿಗ ಅವರ ಮನೆಗೆ 45,00, ಅಂಪಾರು ಗ್ರಾಮದ ಶಂಕರ ಶೇಟ್ ಅವರ ಮನೆಗೆ 40,000, ರವಿ ಆಚಾರಿ ಅವರ ಮನೆಗೆ 35,000, ಸಿದ್ದು ಪೂಜಾರ್ತಿ ಅವರ ಮನೆಗೆ 40,000, ಸುಶೀಲ ಅವರ ಮನೆಗೆ 40,000 ಮತ್ತು ಮೂಕಾಂಬು ಶೇಟ್ ಅವರ ಮನೆಗೆ 50,000, ಚಿತ್ತೂರು ಗ್ರಾಮದ ಲಕ್ಷ್ಮೀ ಮೊಗೆರ್ತಿ ಅವರ ಮನೆಗೆ 35,000 ಮತ್ತು ಸವಿತಾ ಅವರ ಮನೆಗೆ 35,000, ಬೀಜಾಡಿ ಗ್ರಾಮದ ಪ್ರಭಾವತಿ ಅಮ್ಮ ಅವರ ಮನೆಗೆ 50,000, ಶ್ರೀದೇವಿ ಮನೆಗೆ 35,000 ರು.ಗಳಷ್ಟು ಹಾನಿಯಾಗಿದೆ.

ಅದೇ ರೀತಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಬೇಬಿ ಪೂಜಾರ್ತಿ ಅವರ ಮನೆಗೆ ಸಿಡಿಲು ಬಡಿದು 30,000 ಮತ್ತು ಸುಮತಿ ಅವರ ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿದು 10,000 ರು. ಗಳಷ್ಟು ನಷ್ಟ ಸಂಭವಿಸಿದೆ.

ತಾಲೂಕುವಾರು ಕಾರ್ಕಳ 32.20 ಮಿ.ಮೀ., ಕುಂದಾಪುರ 51.30 ಮಿ.ಮೀ., ಉಡುಪಿ 35.30 ಮಿ.ಮೀ., ಬೈಂದೂರು 19.90 ಮಿ.ಮೀ., ಬ್ರಹ್ಮಾವರ 43.80 ಮಿ.ಮೀ., ಕಾಪು 79.40 ಮಿ.ಮೀ., ಹೆಬ್ರಿ 38.80 ಮಿ.ಮೀ. ಮಳೆ ಆಗಿರುತ್ತದೆ.ಕಾರ್ಕಳ, ಹೆಬ್ರಿ ತಾಲೂಕಿನಾದ್ಯಂತ ಭಾರಿ ಮಳೆ

ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಗುಡುಗು ಸಹಿತ ಗಾಳಿಯಿಂದ ಕೂಡಿದ ಭಾರಿ ಮಳೆ ಸುರಿದಿದೆ.

ಕಾರ್ಕಳ ತಾಲೂಕಿನ ಕೆದಿಂಜೆ, ಮಾಳ, ಬಜಗೋಳಿ, ಹೊಸ್ಮಾರ್, ಇನ್ನಾ, ಬೆಳ್ಮಣ್, ಬೈಲೂರು, ಕೌಡೂರು, ಜಾರ್ಕಳ, ಮುಂಡ್ಲಿ ಶಿರ್ಲಾಲು, ಕೆರುವಾಶೆ, ಅಜೆಕಾರು, ರೆಂಜಾಳ, ಇರ್ವತ್ತೂರು, ಸಾಣೂರು, ಹಿರ್ಗಾನ ಗ್ರಾಮ ಭಾಗಗಳು, ಹೆಬ್ರಿ ತಾಲೂಕಿನ ಅಂಡಾರು ಮುನಿಯಾಲು, ವರಂಗ, ಮುದ್ರಾಡಿ, ಶಿವಪುರ, ನಾಡ್ಪಾಲು, ಸೋಮೇಶ್ವರ, ಮಡಾಮಕ್ಕಿ, ಬೆಳ್ವೆ, ಕುಚ್ಚೂರು, ಸಂತೆಕಟ್ಟೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಮುಂಜಾನೆಯಿಂದ ಸಂಜೆ ವರೆಗೆ 30 ಡಿಗ್ರಿ ತಾಪಮಾನವಿತ್ತು.* ಸಿಡಿಲು ಬಡಿದು ಸಾವುಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನಲ್ಲಿ ವರದಿಯಾಗಿದೆ. ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಪಾಲಡ್ಕ ನಿವಾಸಿ ನಿತಿನ್ (24) ಮೃತಪಟ್ಟ ಯುವಕ.

ಕೂಲಿ‌ಕೆಲಸ ಮಾಡಿಕೊಂಡಿದ್ದ ನಿತಿನ್, ಶನಿವಾರ ಮುಂಜಾನೆ 5.30 ರಿಂದ 6.30 ಗಂಟೆಯ ಮಧ್ಯಾವಧಿಯಲ್ಲಿ ಕೇಪ್ಲಾಜೆ ಮಾರಿಗುಡಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಿಡಿಲು ಬಡಿದಿದೆ.ಕಾರ್ಕಳ ತಾಲೂಕಿನ ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ಬೇಜಿ ಪೂಜಾರ್ತಿ ಎಂಬವರ ಮನೆಗೆ ಸಿಡಿಲು ಬಡಿದು ಮೂವತ್ತು ಸಾವಿರ ರು. ಹಾನಿಯಾಗಿದೆ. ನಿಟ್ಟೆ ಗ್ರಾಮದ ಸುಮತಿ ಎಂಬವರ ಮನೆಗೆ ಹಾಗೂ ತೋಟಕ್ಕೆ ಸಿಡಿಲು ಬಡಿದಿದ್ದು ಹತ್ತು ಸಾವಿರ ಹಾನಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!