ಕನ್ನಡಪ್ರಭ ವಾರ್ತೆ ಕೋಲಾರಹಿಂದೂಗಳ ಹೊಸ ವರ್ಷ ಆರಂಭ ದಿನವಾದ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲು ಜನತೆ ಸಿದ್ಧತೆ ನಡೆಸಿದ್ದಾರೆ. ಬೆಲೆ ಏರಿಕೆ ಮತ್ತು ಸುಡು ಬಿಸಿಲಲ್ಲೂ ಬಟ್ಟೆ, ಹೂ ಹಣ್ಣು ಖರೀದಿಗೆ ಮುಗಿಬಿದ್ದ ಜನತೆ, ಹಬ್ಬದ ಮುನ್ನಾದಿನ ಶನಿವಾರ ಮಾರುಕಟ್ಟೆಯಲ್ಲಿಜನಸಾಗರ ಕಂಡು ಬಂತು.ಹಿಂದೆಂದೂ ಕಾಣದ ಬಿಸಿಲಿನ ತಾಪದ ನಡುವೆಯೂ ಜನತೆ ಹಬ್ಬದ ಖರೀದಿಗೆ ಮುಗಿಬಿದ್ದಿದ್ದು, ನಗರದ ಯಾವುದೇ ರಸ್ತೆಗೆ ಹೋದರೂ ಟ್ರಾಫಿಕ್ ಜಾಮ್ ಸಮಸ್ಯೆ ಕಾಡುತ್ತಿತ್ತು. ಜತೆಯಲ್ಲೇ ರಂಜಾನ್ ಬಂದಿರುವುದರಿಂದ ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬಂತು.ಮಾವಿನ ಎಲೆ, ಹಣ್ಣು, ಹೂವು, ಎಲೆ ಅಡಿಕೆ, ತರಕಾರಿಗಳ ಅಂಗಡಿಗಳು ತುಂಬಿ ತುಳುಕುತ್ತಿದ್ದರೆ ದಿನಸಿ ಅಂಗಡಿಗಳಲ್ಲಿ ಬೆಲ್ಲ, ಬೇಳೆ ವ್ಯಾಪಾರವೂ ಜೋರಾಗಿಯೇ ನಡೆದಿದೆ. ಯುಗಾದಿಗೆ ಹೊಸ ಬಟ್ಟೆ ಹಾಕಲೇಬೇಕು ಎಂಬ ಸಂಪ್ರದಾಯದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆ, ಎಂಜಿ ರಸ್ತೆ, ಕಾಳಮ್ಮ ಗುಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು.ರಸ್ತೆ ಬದಿಯ ಅಂಗಡಿಗಳಲ್ಲಿ ಹೂ ಮತ್ತು ಹಣ್ಣು ಮತ್ತಿತರ ಪೂಜಾ ಸಾಮಗ್ರಿಗಳ ಖರೀದಿ ಎಡೆಬಿಡದೇ ಸಾಗಿತ್ತು.ಗ್ರಾಮೀಣ ಭಾಗದಲ್ಲಿ ಕೇಳುವವರಿಲ್ಲದ ಹಸಿರು ಮಾವಿನ ಎಲೆ ನಗರದಲ್ಲಿ ಒಂದು ಸಣ್ಣಕಟ್ಟು ೧೦ ಮತ್ತು ೨೦ ರೂಗಳಿಗೆ ಮಾರಾಟವಾಗುತ್ತಿತ್ತು. ಹಬ್ಬದ ಸಂಭ್ರದ ನಡುವೆ ಜನತೆಗೆ ಹೂ ಹಣ್ಣಿನ ಬೆಲೆ ಗಗನಮುಖಿಯಾಗಿದ್ದರೂ, ತರಕಾರಿ ಬೆಲೆ ಸ್ವಲ್ಪ ಕಡಿಮೆಯಾಗಿತ್ತು. ತಾಪಮಾನ ತಲೆ ಸುಡುತ್ತಿದ್ದರೆ ಬೆಲೆ ಏರಿಕೆ ಜೇಬು ಸುಡುವಂತಿತ್ತು.
ಒಟ್ಟಾರೆ ಬೆಲೆ ಏರಿಕೆಯ ಬಿಸಿಯ ನಡುವೆಯೂ ಹಬ್ಬ ಆಚರಣೆಯ ಆಶಯಕ್ಕೆ ಮಾತ್ರ ಧಕ್ಕೆ ಬಂದಿಲ್ಲವೆಂಬುದನ್ನು ನಗರದ ಪೇಟೆ ಬೀದಿಯಲ್ಲಿನ ಜನ ಸಂದಣಿಯ ವಹಿವಾಟು ಸಾಕ್ಷಿಕರಿಸಿತ್ತು.