ಶಿರಸಿ: ಕಳೆದ ೨೬ ವರ್ಷಗಳಿಂದ ಯುಗಾದಿ ಉತ್ಸವ ಆಚರಿಸಲಾಗುತ್ತಿದ್ದು, ೨೭ನೇ ವರ್ಷದ ಯುಗಾದಿ ಉತ್ಸವಕ್ಕೆ ಮನೆ ಮನೆಗೂ ಅಕ್ಷತೆ ನೀಡಿ, ಆಹ್ವಾನಿಸಲು ಚಾಲನೆ ನೀಡಲಾಗಿದೆ ಎಂದು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ದುಭಾಶಿ ಹೇಳಿದರು.
ಅವರು ಮಂಗಳವಾರ ನಗರದ ವಿಠೋಬಾ ದೇವಸ್ಥಾನದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಪ್ರತಿ ಮನೆಗೂ ಭಗವಾಧ್ವಜ, ಕರಪತ್ರ, ಸ್ಟಿಕ್ಕರ್ ನೀಡಿ ಮನವಿ ನೀಡಲಾಗುತ್ತದೆ. ಎಲ್ಲರೂ ಸಂಭ್ರಮದಲ್ಲಿ ಆಗಮಿಸಬೇಕು. ಯುಗಾದಿ ನಾಲ್ಕು ದಿನ ಮೊದಲೇ ನಗರ ಸಿಂಗರಿಸಲಾಗುತ್ತದೆ. ವಿಕಾಸಾಶ್ರಮ ಮೈದಾನದಿಂದ ೫.೩೦ಗಂಟೆಗೆ ಶೋಭಾಯಾತ್ರೆ ಆರಂಭವಾಗಲಿದೆ. ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ, ಜೈನಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ ಎಂದರು.ಶೋಭಾಯಾತ್ರೆಯು ವಿಕಾಸಾಶ್ರಮ ಮೈದಾನದಿಂದ ಚಾಲನೆಗೊಂಡು ಅಶ್ವಿನಿ ವೃತ್ತ, ದೇವಿಕೆರೆ, ಬಸ್ತಿಗಲ್ಲಿ, ಸಿಪಿ ಬಜಾರ್, ಬಸ್ ನಿಲ್ದಾಣ ವೃತ್ತ, ಶಿವಾಜಿ ಚೌಕ, ಗೋಪಾಲಕೃಷ್ಣ ದೇವಸ್ಥಾನ ಮೂಲಕ ಮಾರಿಕಾಂಬಾ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.
ಸ್ತಬ್ಧಚಿತ್ರ ಸಮಿತಿಯವರು ಸರಿಯಾದ ಸಮಯದಲ್ಲಿ ಪಾಲ್ಗೊಂಡು ಮಾದರಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕು. ಹಿಂದೂ ಧರ್ಮದ ಪ್ರತೀಕವಾದ ಕೇಸರಿಗೆ ಹೆಚ್ಚಿನ ಮಹತ್ವ ನೀಡಬೇಕು. ಭಾರತೀಯ ಶುಭ್ರವೇಷದೊಂದಿಗೆ ಕೇಸರಿ ಶಾಲು, ಕೇಸರಿ ಪೇಟ, ತಿಲಕಧಾರಿಯಾಗಿ ಪಾಲ್ಗೊಳ್ಳಬೇಕು ಎಂದರು. ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವವರು ಭಗವಾಧ್ವಜದ ಜತೆ ಭಾಗವಹಿಸಬೇಕು. ನಮ್ಮ ಧರ್ಮ, ಸಂಸ್ಕೃತಿ, ಮಹಾಪುರುಷರ ಘೋಷಣೆಗಳನ್ನು ಮಾತ್ರ ಉದ್ಘರಿಸುವುದು. ಭಕ್ತಿಯಿಂದ ಪಾಲ್ಗೊಂಡು ಶಾಂತತೆಯನ್ನು ಕಾಪಾಡಿ ಯುಗಾದಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.ಸುದ್ದಿಗೋಷ್ಠಿಯಲ್ಲಿ ಯುಗಾದಿ ಉತ್ಸವ ಸಮಿತಿಯ ಚಂದ್ರು ಎಸಳೆ, ಸುರೇಶ ಶೆಟ್ಟಿ, ಮಾಲತೇಶ ಹಾದಿಮನಿ, ಉಪೇಂದ್ರ ಮೇಸ್ತ, ಸುರೇಶ ಶೆಟ್ಟಿ, ಪರಮಾನಂದ ಹೆಗಡೆ, ಗೋಪಾಲ ದೇವಡಿಗ, ಮಹೇಶ, ರಾಧಿಕಾ ನಾಯ್ಕ, ಮಾಲತೇಶ ಹಾದಿಮನಿ, ನಾಗರಾಜ ಮಡಿವಾಳ ಮತ್ತಿತರರು ಇದ್ದರು.
ನಮ್ಮ ಸಂಸ್ಕೃತಿ, ಪರಂಪರೆ, ಧರ್ಮದ ಉಳಿವಿಗಾಗಿ, ಸಾಮಾಜಿಕ ಬದ್ಧತೆಗಾಗಿ ಹೊಸ ವರ್ಷದ ಆಚರಣೆಯೊಂದಿಗೆ ಹೊಸ ವಿಶ್ವಾವಸು ನಾಮ ಸಂವತ್ಸರವನ್ನು ಅದ್ಧೂರಿಯಾಗಿ ಸ್ವಾಗತಿಸೋಣ ಎನ್ನುತ್ತಾರೆ ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ ಹೆಬ್ಬಾರ.