ಚಿತ್ರದುರ್ಗ: ಕಳೆದ ಎರಡು ತಿಂಗಳಿನಿಂದ ಬಾಯ್ತೆರುದುಕೊಂಡಿದ್ದ ದುರ್ಗದ ಯುಜಿಡಿ ಚೇಂಬರ್ ಇಂದು ತನ್ನ ಬಾಯಿ ಮುಚ್ಚಿಕೊಂಡು ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಚಂದ್ರವಳ್ಳಿ ತಿರುವಿನಿಂದ ಹೊಳಲ್ಕೆರೆ ಕಡೆಗೆ ಹೋಗಲು ನಿರ್ಮಾಣ ಮಾಡಿರುವ ರಸ್ತೆ ಮಧ್ಯೆದಲ್ಲಿಯೇ ಯುಜಿಡಿ ಚೇಂಬರ್ ಅಳವಡಿಸಲಾಗಿತ್ತು. ಕೆಲವು ತಿಂಗಳುಗಳ ಹಿಂದೆ ಅದರ ಮುಚ್ಚಳಿಕೆ ಹಾಳಾಗಿ ಹೋಗಿದ್ದರಿಂದ ದಾರಿಹೋಕರು ಯಾರಾದರೂ ಬಿದ್ದು ಪ್ರಾಣಾಪಾಯಕ್ಕೆ ಒಳಗಾಗಬಹುದೆಂದು ಸಂಚಾರಿಗಳು ಅದಕ್ಕೆ ಟೈರ್ ಮತ್ತು ಮುಳ್ಳು ಬೇಲಿ ನಿರ್ಮಿಸಿ ಜನ ಮತ್ತು ವಾಹನ ಸಂಚಾರಿಗರನ್ನು ರಕ್ಷಣೆ ಮಾಡಿದ್ದರು. ಈ ಕುರಿತು ಕನ್ನಡಪ್ರಭ ಮಂಗಳವಾರ ವಿಶೇಷ ವರದಿ ಪ್ರಕಟಿಸಿ ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
ಜನಪ್ರತಿನಿಧಿಗಳ ಕಿವಿ ಮತ್ತು ಕಣ್ಣಿಗೆ ದುರ್ಗದ ಇಂತಹ ಅದೆಷ್ಟೋ ಘಟನೆಗಳು ಕಣ್ಣಿಗೆ ಕಾಣುವುದೇ ಇಲ್ಲ. ಅಂತಹ ಪರಿಸ್ಥಿತಿ ನಗರದಲ್ಲಿದೆ. ಹೀಗಿದ್ದರೂ ವರದಿ ಪ್ರಕಟಗೊಳ್ಳುತ್ತಿದ್ದಂತೆಯೇ ಚೇಂಬರ್ ಮುಚ್ಚಳಿಕೆಯನ್ನು ಅಳವಡಿಸಿರುವುದರಿಂದ ದುರ್ಗದಲ್ಲಿ ಕೆಲವರಾದರೂ ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆಗಳನ್ನು ಕೇಳುವಂತವರು ಇದ್ದಾರೆಂಬ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.