ವಾಲ್ಮೀಕಿ ಜಯಂತೀಲಿ ‘ಉಗ್ರ’ಪ್ಪ ಭಾಷಣ

KannadaprabhaNewsNetwork |  
Published : Oct 27, 2026, 04:00 AM IST
ಉಗ್ರಪ್ಪ | Kannada Prabha

ಸಾರಾಂಶ

ಪರಿಶಿಷ್ಟ ಪಂಗಡದವರ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಿದ ಒಬ್ಬರಿಗೆ ಮಾತ್ರ ಪ್ರತೀ ವರ್ಷ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಬೇಕು. ಯಾರ್‍ಯಾರೋ ಹೇಳಿದರು ಎಂದು ಹತ್ತಾರು ಮಂದಿಗೆ ನೀಡುವುದಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸರ್ಕಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲೇ ಆಗ್ರಹಿಸಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಶಿಷ್ಟ ಪಂಗಡದವರ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಿದ ಒಬ್ಬರಿಗೆ ಮಾತ್ರ ಪ್ರತೀ ವರ್ಷ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಬೇಕು. ಯಾರ್‍ಯಾರೋ ಹೇಳಿದರು ಎಂದು ಹತ್ತಾರು ಮಂದಿಗೆ ನೀಡುವುದಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸರ್ಕಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲೇ ಆಗ್ರಹಿಸಿದ ಘಟನೆ ನಡೆಯಿತು. ಅಲ್ಲದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ದುರುಪಯೋಗದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ದಲಿತರ ಹಣ ದುರುಪಯೋಗವಾದರೆ ಬೀದಿಗಳಿದು ಹೋರಾಟ ಮಾಡುವ ಗುಣವನ್ನು ಸಮುದಾಯದ ಜನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ವೇದಿಕೆಯಲ್ಲಿ ಉಗ್ರಪ್ಪ ಅಬ್ಬರದ ಭಾಷಣ ಮಾಡಿದರು. ಈ ವೇಳೆ, ಕಳೆದ ಕೆಲ ವರ್ಷಗಳಿಂದ ಹಲವರಿಗೆ ಪ್ರಶಸ್ತಿ ನೀಡುತ್ತಿದ್ದೀರಿ. ಇದೀಗ ಮೀಸಲಾತಿ ಹೆಚ್ಚಳ ರದ್ದುಗೊಳಿಸಿದ ತೀರ್ಪಿನಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ತೀರ್ಪಿನಿಂದ ನಮಗೆ ಆಗಿರುವ ಅನ್ಯಾಯದ ವಿರುದ್ಧ ಈ ಪ್ರಶಸ್ತಿ ಪಡೆದವರು ಧ್ವನಿ ಎತ್ತಿದ್ದಾರೆಯೇ, ಹೋರಾಟ ನಡೆಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ಅಲ್ಲದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರುಪಯೋಗ ಪ್ರಕರಣವನ್ನೂ ಪ್ರಸ್ತಾಪಿಸಿ ತಮ್ಮ ಅಸಮಾಧಾನ ಹೊರಹಾಕಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಮಾಜ ಕಲ್ಯಾಣ ಸಚಿವ ಕೆ.ಎಚ್‌.ಮುನಿಯಪ್ಪ, ಪರಿಶಿಷ್ಠ ಪಂಗಡಗಳ ಸಚಿವ ರಘು ಮೂರ್ತಿ ಸೇರಿ ವಿವಿಧ ಸಚಿವರು ಇದ್ದ ವೇದಿಕೆಯಲ್ಲೇ ಉಗ್ರಪ್ಪ ಅಬ್ಬರಿಸಿದ್ದು ಒಂದು ರೀತಿ ಇರುಸು ಮುರುಸು ಉಂಟು ಮಾಡಿತಲ್ಲದೆ, ಸಚಿವರು ತಮ್ಮ ಭಾಷಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾಡಿತು.

ಸಚಿವ ರಘುಮೂರ್ತಿ ಸಮುಜಾಯಿಷಿ:

ಇನ್ನು, ಉಗ್ರಪ್ಪ ಅವರು ಪ್ರಸ್ತಾಪಿಸಿದ ವಿಷಯಗಳಿಗೆ ವೇದಿಕೆಯಲ್ಲೇ ಸಮಜಾಯಿಷಿ ನೀಡಿದ ಪರಿಶಿಷ್ಟ ಪಂಗಡಗಳ ಸಚಿವ ಟಿ.ರಘುಮೂರ್ತಿ, ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಉಗ್ರಪ್ಪ ಅವರ ರೀತಿಯಲ್ಲಿ ಎಲ್ಲ ವಿಷಯ ತಿಳಿದುಕೊಳ್ಳಲು, ಹೋರಾಟ ಮಾಡಲು ಸಾಧ್ಯವಾಗದಿರಬಹುದು. ಆದರೆ ಅವರು ಒಂದೊಂದು ವಿಷಯದಲ್ಲಿ ಸಾಧನೆ ಮಾಡಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದು ಹೇಳಿದರು.

ಹಾಗೆಯೇ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ರಾಜಕೀಯ ಕಾರಣಗಳಿಗಾಗಿ ಗೊಂದಲ ಸೃಷ್ಟಿಸಲಾಯಿತು. ಇದು ಅಧಿಕಾರಿಗಳು, ಮಧ್ಯವರ್ತಿಗಳು ಸೇರಿ ಮಾಡಿದ ಹಗರಣ. ಆ ಸಂದರ್ಭದಲ್ಲಿ ನಾನೇ ಗೃಹ ಸಚಿವನಾಗಿದ್ದೆ. ಆರೋಪಕ್ಕೆ ಸಂಬಂಧಿಸಿ ಉಲ್ಲೇಖಿಸಲಾಗಿದ್ದ ಎಲ್ಲ ಹಣವೂ ಸರ್ಕಾರಕ್ಕೆ ವಾಪಸ್ ಬಂದಿದೆ. ಇದರಿಂದ ಸಮುದಾಯದ ಜನರಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದಪುರಿ ಸ್ವಾಮೀಜಿ, ಸಚಿವ ರಿಜ್ವಾನ್‌ ಅರ್ಷದ್‌, ಶಾಸಕರಾದ ದೇವೇಂದ್ರಪ್ಪ, ರಾಜಾ ವೇಣುಗೋಪಾಲ ನಾಯಕ್‌, ಮಾಜಿ ಸಚಿವ ಎಚ್‌.ಆಂಜನೇಯ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!