ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ, ಬ್ರಹ್ಮಕಲಶೋತ್ಸವ, ವಿಜಯಗೋಪುರ ನಿರ್ಮಾಣ ಕಾರ್ಯದಲ್ಲಿ ಭಕ್ತರು ತಮಗೆ ದೊರೆತ ಯೋಗ ಭಾಗ್ಯವೆಂದು ಭಾವಿಸಿ ಭಕ್ತಿ, ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಬ್ರಹ್ಮಕಲಶೋತ್ಸವವೂ ಸೇರಿದಂತೆ ವಿಜಯಗೋಪುರ ಹಾಗೂ ನೂತನ ಬ್ರಹ್ಮರಥ ನಿರ್ಮಾಣಕ್ಕೆ ಒಟ್ಟು ಸುಮಾರು 10 ಕೋಟಿ ರು. ವೆಚ್ಚದ ಬೃಹತ್ ಯೋಜನೆ ಹಮ್ಮಿ ಕೊಳ್ಳಲಾಗಿದ್ದು, ಭಕ್ತರು ಸಮರ್ಪಣಾಭಾವದಿಂದ ಸೇವಾ ಕಾರ್ಯದಲ್ಲಿ ಸಹಭಾಗಿಗಳಾಗಬೇಕು ಎಂದು ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಹೇಳಿದರು.ಅವರು ಶುಕ್ರವಾರ ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ನೂತನ ವಿಜಯಗೋಪುರ ನಿರ್ಮಾಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ವರ್ಷದೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿರ್ದಿಷ್ಟ ಗುರಿ ಹೊಂದಿ ಎರಡು ತಿಂಗಳ ಮೊದಲೇ ಕೆಲಸ ಕಾರ್ಯಗಳನ್ನು ಪರಿಪೂರ್ಣಗೊಳಿಸುವ ಉದ್ದೇಶ ನಮ್ಮದು. ಪ್ರತಿ 3 ತಿಂಗಳಿಗೊಮ್ಮೆ ಎಲ್ಲ ಭಕ್ತವರ್ಗವನ್ನು ಸೇರಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಕಾಮಗಾರಿಯ ಪ್ರಗತಿಯ ಮಾಹಿತಿಯನ್ನು ತಿಳಿಸುವಂತಾಗಬೇಕು ಎಂದರು.ಫೆ.17ರಂದು ನಡೆದ ವಿಜಯಗೋಪುರ ಶಿಲಾನ್ಯಾಸ ಕಾರ್ಯಕ್ರಮದ ಖರ್ಚು ವೆಚ್ಚಗಳ ವಿವರವನ್ನು ಸಹಕೋಶಾಧಿಕಾರಿ ಸಂಜೀವ ಶೆಟ್ಟಿ ಕುಂಟಿನಿ ಮಾಹಿತಿ ನೀಡಿದರು.
ಜಯಂತ ಶೆಟ್ಟಿ ಕುಂಟಿನಿ ಮತ್ತು ಅರವಿಂದ ಕಾರಂತ್ ಶಿಲಾನ್ಯಾಸ ಕಾರ್ಯಕ್ರಮದ ಬಗೆಗೆ ಅನಿಸಿಕೆ ವ್ಯಕ್ತಪಡಿಸಿದರು. ವಿಜಯಗೋಪುರದ ಎಂಜಿನೀಯರ್ ಗಣೇಶ್ ಮಾತನಾಡಿ, ರಾಜಗೋಪುರ ನಿರ್ಮಾಣ ಕಾಮಗಾರಿ ಭರದಿಂದ ಹಗಲು ರಾತ್ರಿ ನಡೆಯುತ್ತಿದ್ದು ಮೊದಲ ಹಂತದ ಕಾರ್ಯಗಳು ಏಪ್ರಿಲ್‌ನೊಳಗೆ ಮುಗಿಸಿ ಮಳೆಗಾಲದೊಳಗೆ ಗ್ರೌಂಡ್ ಲೆವೆಲ್ ಕಾಮಗಾರಿ ಪೂರ್ಣಗಳಿಸಲು ಪ್ರಯತ್ನಿಸಲಾಗುವುದು. ಮುಂದಿನ ಸಭೆಯಲ್ಲಿ ಸಮಗ್ರ ಮಾಹಿತಿ ನೀಡಲಾಗುವುದು ಎಂದರು.ಸಂಚಾಲಕ ಕೆ.ಮೋಹನ ಕುಮಾರ್ ಮಾತನಾಡಿದರು. ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ಪ್ರಸ್ತಾವಿಸಿದರು.
ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷ ಪಾಂಡುರಂಗ ಬಾಳಿಗಾ, ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಭರತ್ ಕುಮಾರ್, ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸಮಿತಿ ಪದಾಧಿಕಾರಿಗಳು, ಉದ್ಯಮಿಗಳು, ಗ್ರಾಮಸ್ಥರು ಹಾಗು ಮಹಿಳೆಯರು ಭಾಗವಹಿಸಿದ್ದರು. ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು........................2026 ಮಾ.3ರಿಂದ ಬ್ರಹ್ಮಕಲಶೋತ್ಸವ
2026 ಮಾರ್ಚ್ 3ರಿಂದ 11ರ ವರೆಗೆ ಶ್ರೀ ಜನಾರ್ದನ ಸ್ವಾಮಿಯ ಬ್ರಹ್ಮಕಲಶೋತ್ಸವ ನಡೆಸಲು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ದಿನ ನಿಗದಿಪಡಿಸಿದ್ದಾರೆ. ಮಾ.9ರಂದು ಬ್ರಹ್ಮಕಲಶಾಭಿಷೇಕ ನಡೆಸಲು ನಿರ್ಧರಿಸಲಾಗಿದೆ. ಕ್ಷೇತ್ರಕ್ಕೆ ನೂತನ ಬ್ರ ಹ್ಮರಥವನ್ನು ನಿರ್ಮಿಸಿ ಸಮರ್ಪಿಸಲು ಅಮೆರಿಕದ ಪುತ್ತಿಗೆ ಮಠದ, ಮೂಲತಃ ಉಜಿರೆ ನಿವಾಸಿ ಕಿರಣ ಕುಮಾರ್ ಮತ್ತು ಮನೆಯವರು ಸಂಕಲ್ಪಿಸಿದ್ದು, ಬ್ರಹ್ಮ ಕಲಶೋತ್ಸವ ವೇಳೆ ಸಮರ್ಪಿಸಲು ಯೋಜಿಸಲಾಗಿದೆ. ಬೆಂಗಳೂರಿನಲ್ಲಿರುವ ಉಜಿರೆಯ ನಿವಾಸಿಗಳು, ಉದ್ಯಮಿಗಳು, ಉದ್ಯೋಗಿಗಳ ಅಪೇಕ್ಷೆಯಂತೆ ಬ್ರಹ್ಮ ಕಲಶೋತ್ಸವ ಬೆಂಗಳೂರು ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಶೀಘ್ರ ಕಾರ್ಯಪ್ರವೃತ್ತರಾಗುವುದಾಗಿ ನಿರ್ಧರಿಸಲಾಗಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಅನುವಂಶಿಕ ಆಡಳಿ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿದ್ದಾರೆ.