ಯುಕೆಪಿ-3: ಭೂಸ್ವಾಧೀನಕ್ಕೆ ಶೀಘ್ರವೇ ಪ್ರಾಧಿಕಾರ ರಚನೆ: ಸಚಿವ ಆರ್.ಬಿ. ತಿಮ್ಮಾಪೂರ

KannadaprabhaNewsNetwork |  
Published : Sep 20, 2025, 01:02 AM IST
(ಫೋಟೊ 19ಬಿಕೆಟಿ5, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ  ಅವರು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿದರು,) | Kannada Prabha

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮುಳುಗಡೆ ಆಗುವ ಭೂಮಿಗೆ ರಾಜ್ಯ ಸರ್ಕಾರ ಏಕರೂಪದ ಒಪ್ಪಿತ ಬೆಲೆ ಘೋಷಿಸಿದ ಬೆನ್ನಲ್ಲೇ ಇದೀಗ ಶೀಘ್ರದಲ್ಲೇ 2013ರೆ ಹೊಸ ಭೂಸ್ವಾಧೀನ ಕಾಯ್ದೆ ಸೆಕ್ಷನ್-51ರನ್ವಯ ಪ್ರಾಧಿಕಾರ ರಚಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮುಳುಗಡೆ ಆಗುವ ಭೂಮಿಗೆ ರಾಜ್ಯ ಸರ್ಕಾರ ಏಕರೂಪದ ಒಪ್ಪಿತ ಬೆಲೆ ಘೋಷಿಸಿದ ಬೆನ್ನಲ್ಲೇ ಇದೀಗ ಶೀಘ್ರದಲ್ಲೇ 2013ರೆ ಹೊಸ ಭೂಸ್ವಾಧೀನ ಕಾಯ್ದೆ ಸೆಕ್ಷನ್-51ರನ್ವಯ ಪ್ರಾಧಿಕಾರ ರಚಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಅವರು, ಇನ್ನು ಮುಂದೆ ಎಲ್ಲ ಭೂಸ್ವಾಧೀನ ಪ್ರಕರಣಗಳನ್ನು ಪ್ರಾಧಿಕಾರದಲ್ಲೇ ಇತ್ಯರ್ಥಗೊಳಿಸಲಾಗುವುದು ಎಂದರು.

ಯುಕೆಪಿ ಅಡಿಯಲ್ಲಿ ಏಕಕಾಲಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಮುಳುಗಡೆ ಆಗುವ ಜಮೀನಿಗೆ ನೀರಾವರಿ ಪ್ರದೇಶಕ್ಕೆ ಎಕರೆಗೆ ₹40 ಲಕ್ಷ ಹಾಗೂ ಒಣಬೇಸಾಯಕ್ಕೆ ₹30 ಲಕ್ಷ, ಕಾಲುವೆ ನಿರ್ಮಾಣಕ್ಕೆ ಸ್ವಾಧೀನದ ಜಮೀನಿಗೆ ಎಕರೆ ನೀರಾವರಿಗೆ ₹30 ಲಕ್ಷ ಹಾಗೂ ಒಣಬೇಸಾಯಕ್ಕೆ ₹25 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ. ಈ ಹಿಂದೆ ಬೊಮ್ಮಾಯಿ ಸರ್ಕಾರ ಘೋಷಿಸಿದ್ದ ಬೆಲೆಗೂ ನಮ್ಮ ಸರ್ಕಾರ ಘೋಷಿಸಿದ ಬೆಲೆಗೂ ಇರುವ ವ್ಯತ್ಯಾಸವನ್ನು ವಿವರಿಸಿದರು.

ಯುಕೆಪಿಗೆ ಇನ್ನೂ 1,04,301 ಎಕರೆ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದಕ್ಕೆ ಅಂದಾಜು ₹70 ರಿಂದ ₹75 ಸಾವಿರ ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಿದ್ದು, ಮುಂದಿನ ಮೂರು ವರ್ಷಗಳ ಅವಯಲ್ಲಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಿ, ಭೂಪರಿಹಾರ ಒದಗಿಸಿ ಯೋಜನೆ ಪೂರ್ಣಗೊಳಿಸಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಹಣಕಾಸು ಹೊಂದಾಣಿಕೆಗೆ ಬಗ್ಗೆ ಯಾವುದೇ ತೊಂದರೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಣಕಾಸು ಇಲಾಖೆ ಹೊಂದಿದ್ದರಿಂದ ಹಣ ಹೊಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣ ಹಿಂಪಡೆಯಲು ರೈತರು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು, ಶಾಸಕರು ಹಾಗೂ ಹೋರಾಟ ಸಮಿತಿ ಮುಖಂಡರು ರೈತರ ಜೊತೆಗೆ ಸಮನ್ವಯ ಸಾಧಿಸಿ, ನ್ಯಾಯಾಲಯ ಪ್ರಕರಣ ಹಿಂಪಡೆಯಲು ಮನವೊಲಿಸಲು ಕಾಳಜಿ ವಹಿಸುವಂತೆ ಸಚಿವರು ಕೋರಿದರು.

ಯುಕೆಪಿ ಯೋಜನೆ ಪೂರ್ಣಗೊಳಿಸಬೇಕು, ಮುಳುಗಡೆ ಆಗುವ ಜಮೀನಿಗೆ ಸೂಕ್ತ ಪರಿಹಾರ ಹಾಗೂ ಮುಳುಗಡೆ ಆಗುವ 20 ಗ್ರಾಮಗಳಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಲ್ಪಿಸುವಂತೆ ದಶಕಗಳಿಂದ ಹೋರಾಟ ನಡೆಯುತ್ತ ಬಂದಿದ್ದವು. ಇದೀಗ ನಮ್ಮ ಸರ್ಕಾರ ಹೆಚ್ಚಿನ ಪರಿಹಾರ ಘೋಷಿಸಿದೆ. ಇದಕ್ಕಾಗಿ ಶ್ರಮಿಸಿದ, ಹೋರಾಟ ನಡೆಸಿದವರೆಲ್ಲರಿಗೂ ಅಭಿನಂದಿಸುವುದಾಗಿ ತಿಮ್ಮಾಪೂರ ಹೇಳಿದರು.

ಯುಕೆಪಿ ಹಂತ-3 ಪೂರ್ಣಗೊಂಡಲ್ಲಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಒಟ್ಟು 5.94 ಲಕ್ಷ ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಇದರಿಂದ ಈ ಭಾಗದ ರೈತರ ಅಭಿವೃದ್ಧಿ ಹೆಚ್ಚುತ್ತದೆ ಎಂದು ತಿಳಿಸಿದರು.

ಪರಿಹಾರ ಘೋಷಣೆ ಕಡಿಮೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದ ಹಿಂದಿನ ಜಲಸಂಪನ್ಮೂಲ ಸಚಿವ, ಸಂಸದ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ತಿಮ್ಮಾಪೂರ, ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲು ಹೋಗಲ್ಲ. 35 ವರ್ಷಗಳಿಂದ ನಮ್ಮ ಜನರು ಅದರ ನೋವು ಅನುಭವಿಸಿದ್ದಾರೆ. ಅದಕ್ಕೆ ಈಗ ಪರಿಹಾರ ಸಿಕ್ಕಿದೆ. ಅವರಿಗೆ ರೈತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡೆಸಲಿ ಎಂದು ತಿರುಗೇಟು ನೀಡಿದರು.

ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ :

ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರ ಕಚೇರಿಯಲ್ಲಿ ಶೇ.59 ಹುದ್ದೆಗಳು ಖಾಲಿ ಇರುವ ಬಗ್ಗೆ ಗಮನ ಸೆಳೆದಾಗ, ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲಾಗುವುದು. ಆಯುಕ್ತರು ಸೇರಿ ಎಲ್ಲ ಖಾಲಿ ಹುದ್ದೆಗಳನ್ನು ತುಂಬಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಇದ್ದರು.

ಈ ಹಿಂದೆ ಆಲಮಟ್ಟಿ ಜಲಾಶಯ ಎತ್ತರವನ್ನು 519.60 ಮೀಟರ್ ಗೆ ಎತ್ತರಿಸಿದಾಗ ಗೇಟ್ ಹಾಕಿ ನೀರು ನಿಲ್ಲಿಸಲು ಸಾಕಷ್ಟು ಸಮಸ್ಯೆ ಆಗಿತ್ತು. ಆಗ ನಾನೇ ಉಸ್ತುವಾರಿ ಸಚಿವನಾಗಿದ್ದೆ. ಅಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಕರೆದುಕೊಂಡು ಬಂದು ₹638 ಕೋಟಿ ಪ್ಯಾಕೇಜ್ ಕೊಡಲಾಗಿತ್ತು. ಈಗ 3ನೇ ಹಂತಕ್ಕೆ ಭೂಮಿಗೆ ಸೂಕ್ತ ಬೆಲೆ ನಿಗದಿ ಪಡಿಸಿದಾಗಲೂ ನಾನೇ ಉಸ್ತುವಾರಿ ಸಚಿವನಾಗಿದ್ದು, 35 ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕ ಸಮಾಧಾನ ತಂದಿದೆ.

-ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವ, ಬಾಗಲಕೋಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ