ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಸಂಬಂಧಿಸಿದಂತೆ ಮುಳುಗಡೆ ಜಮೀನಿಗೆ ಸೂಕ್ತ ಬೆಲೆಗಾಗಿ ಸಾಕಷ್ಟು ಹೋರಾಟ ನಡೆದಿವೆ. ಮುಳುಗಡೆ ಜಮೀನಿಗೆ ಏಕರೂಪದ ಒಪ್ಪಿತ ಪರಿಹಾರ ಘೋಷಿಸುವ ಮೂಲಕ ಸಂತ್ರಸ್ತರಿಗೆ ನೆರವು ನೀಡಬೇಕು ಎನ್ನುವ ಕೂಗು ದಶಕಗಳಿಂದ ಕೇಳಿ ಬರುತ್ತಿತ್ತು. ಈ ಕೂಗಿಗೆ ರಾಜ್ಯ ಸರ್ಕಾರ ತಥಾಸ್ತು ಎನ್ನುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಆಲಮಟ್ಟಿ ಜಲಾಶಯವನ್ನು 524.257 ಮೀಟರ್‌ಗೆ ಎತ್ತರಗೊಳಿಸುವುದರಿಂದ ಹಿನ್ನೀರಿನಲ್ಲಿ ಮುಳುಗಡೆ ಆಗುವ ಜಮೀನಿಗೆ ನೀರಾವರಿಗೆ ಪ್ರತಿ ಎಕರೆಗೆ ₹40 ಲಕ್ಷ, ಒಣಬೇಸಾಯಕ್ಕೆ₹ 30 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದೆ.
ಜಲಾಶಯವನ್ನು 524.257 ಮೀಟರ್‌ಗೆ ಏರಿಸುವುದರಿಂದ 75 ಸಾವಿರ ಎಕರೆ ಜಮೀನು ಸಂಪೂರ್ಣ ಮುಳುಗಡೆ ಆಗಲಿದ್ದು, ಜಮೀನು ಕಳೆದುಕೊಳ್ಳುವ ರೈತರು ಸಂತ್ರಸ್ತರಾಗುತ್ತಾರೆ. ಹೀಗಾಗಿ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ಕೊಡಬೇಕು ಎನ್ನುವುದು ರೈತರ ಬೇಡಿಕೆಯಾಗಿತ್ತು.ಹಿಂದಿನ ಬೊಮ್ಮಾಯಿ ನೇತೃತ್ವದ ಸರ್ಕಾರ ಎಕರೆಗೆ ನೀರಾವರಿಗೆ ₹24 ಲಕ್ಷ ಹಾಗೂ ಒಣಭೂಮಿಗೆ ₹20 ಲಕ್ಷ ದರ ಘೋಷಿಸಿತ್ತು. ಇದಕ್ಕೆ ರೈತರು ಒಪ್ಪದೆ ಬಹುತೇಕರು ಪರಿಹಾರ ಪಡೆಯಲಿಲ್ಲ. ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀರಾವರಿ ಎಕರೆಗೆ ₹40 ಲಕ್ಷ, ಒಣಬೇಸಾಯ ಭೂಮಿಗೆ ₹30 ಲಕ್ಷ ಏಕರೂಪದ ಒಪ್ಪಿತ ದರ ನಿಗದಿ ಮಾಡಿರುವುದು ಐತಿಹಾಸಿಕ ತೀರ್ಮಾನ ಎಂದು ಕಾಂಗ್ರೆಸ್ ಮುಖಂಡರು ಬಣ್ಣಿಸಿದ್ದಾರೆ. ಆದರೆ, ಇಂದಿನ ಮಾರುಕಟ್ಟೆಗೆ ಇದು ಸೂಕ್ತ ಬೆಲೆಯಲ್ಲ ಎಂದು ಬಿಜೆಪಿ ಅಸಮಾಧಾನ ಹೊರಹಾಕಿದೆ. ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಮುಖಂಡರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.------------
ಬಾಕ್ಸ್.....ಐತಿಹಾಸಿಕ ತೀರ್ಮಾನ ಎಂದ ತಿಮ್ಮಾಪೂರ
ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಪ್ರತಿಕ್ರಿಯಿಸಿದ್ದಾರೆ.ಹಲವು ವರ್ಷಗಳ ಮುಳುಗಡೆ ಸಂತ್ರಸ್ತರ ಹೋರಾಟಕ್ಕೆ ಸಂದ ಜಯ ಇದಾಗಿದೆ. ಹಿನ್ನೀರಿಗೆ ಮುಳುಗಡೆ ಆಗುವ 75 ಸಾವಿರ ಎಕರೆ ಜಮೀನನ್ನು ಒಂದೇ ಹಂತದಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಹಾಗೂ ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಹಾಗೂ ಒಣಭೂಮಿಗೆ ₹30 ಲಕ್ಷ ಒಪ್ಪಿತ ದರ ನೀಡಲು ತೀರ್ಮಾನ ಮಾಡಲಾಗಿದೆ. ನಮ್ಮ ಭಾಗದ ಜನರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದ್ದು, ಅತೀವ ಸಂತಸ ತಂದಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಗತಿಸಿದ ಹೋರಾಟ ಸಮಿತಿ : ರಾಜ್ಯ ಸರ್ಕಾರ ನೀರಾವರಿಗೆ ₹40 ಲಕ್ಷ, ಒಣಬೇಸಾಯಕ್ಕೆ ₹30 ಲಕ್ಷ ಏಕರೂಪದ ಒಪ್ಪಿತ ದರ ನಿರ್ಧಾರ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ ತಿಳಿಸಿದ್ದಾರೆ.------
ಬಾಕ್ಸ್.....ಮಾತು ಉಳಿಸಿಕೊಳ್ಳದ ಕಾಂಗ್ರೆಸ್ ಮುಖಂಡರು
ಸರ್ಕಾರದ ಇಂದಿನ ನಿರ್ಧಾರಕ್ಕೆ ಮಾಜಿ ಜಲಸಂಪನ್ಮೂಲ ಸಚಿವ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಮ್ಮ ಸರ್ಕಾರ ನಾಲ್ಕು ವರ್ಷಗಳ ಹಿಂದೆ ನೀರಾವರಿಗೆ ₹24 ಲಕ್ಷ ಹಾಗೂ ಒಣಬೇಸಾಯಕ್ಕೆ ₹20 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಆಗ ಜಿಲ್ಲೆಯ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ, ಎಕರೆಗೆ ಕ್ರಮವಾಗಿ ₹50 ಲಕ್ಷ, ₹40 ಲಕ್ಷ ಕೊಡಬೇಕು. ಹೆಚ್ಚಿನ ಪರಿಹಾರಕ್ಕೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದರಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕ್ರಮವಾಗಿ ₹50 ಲಕ್ಷ, ₹40 ಲಕ್ಷ ದರ ಕೊಡಿಸುವುದರ ಜೊತೆಗೆ ಹೆಚ್ಚಿನ ಪರಿಹಾರ ಕೋರಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು
ಆದರೆ ಈಗ ನೋಡಿದರೆ ಕಡಿಮೆ ದರ ನಿಗದಿ ಮಾಡಿದ್ದಲ್ಲದೆ ಕನ್ಸಂಟ್ ಅವಾರ್ಡ್ ಮಾಡಿ ಹೆಚ್ಚಿನ ಪರಿಹಾರಕ್ಕೆ ನ್ಯಾಯಾಲಯಕ್ಕೆ ಹೋಗದಂತೆ ಮಾಡಿದ್ದಾರೆ. ನಮ್ಮ ಸರ್ಕಾರ ಕ್ರಮವಾಗಿ ₹24, ₹20 ಲಕ್ಷ ದರ ಘೋಷಿಸಿದಾಗ ಅಂದಿನ ಭೂಮಿ ಹಾಗೂ ಚಿನ್ನದ ಬೆಲೆಗಳ ದರ ಹಾಗೂ ಇಂದಿನ ದರಕ್ಕೆ ಸಾಕಷ್ಟು ವ್ಯತ್ಯಾಸ ಇದೆ. ಆಗ ಹತ್ತು ಗ್ರಾಂ ಚಿನ್ನಕ್ಕೆ ₹50 ಸಾವಿರ ಇತ್ತು. ಈಗ ₹1 ಲಕ್ಷ ದಾಟಿದೆ. ಅದರಂತೆ ಭೂಮಿಯ ಬೆಲೆಯೂ ಹೆಚ್ಚಳವಾಗಿಧೇ. ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಬೇಕು ಹಾಗೂ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಹೋಗಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಒಂದೇ ಹಂತದಲ್ಲಿ ಭೂಸ್ವಾಧೀನ ತೀರ್ಮಾನ ಸ್ವಾಗತಾರ್ಹವಾದರೂ ಒಪ್ಪಿತ ದರ ಘೋಷಣೆಯಂತೆ ₹40 ಲಕ್ಷ ಹಾಗೂ ₹30 ಲಕ್ಷ ಪರಿಹಾರ ಸಂಪೂರ್ಣ ಸಂತೃಪ್ತಿದಾಯಕವಾಗಿಲ್ಲ. ಡಿಕೆಶಿ ಅವರು ಕರೆದಿದ್ದ ಸಭೆಯಲ್ಲಿ ನಾವು ಸ್ಪಷ್ಟವಾಗಿ ₹50 ಲಕ್ಷ ಹಾಗೂ ₹40 ಲಕ್ಷ ಬೇಡಿಕೆ ಇಟ್ಟಿದ್ದೇವು. ವಾಸ್ತವಾಗಿ ಜಮೀನಿನ ಬೆಲೆ ಇದರ ಎರಡು ಪಟ್ಟು ಜಾಸ್ತಿ ಇದೆ. ಉತ್ತರ ಕರ್ನಾಟಕದ ನೀರಾವರಿಗೆ ಒಳಪಡುತ್ತದೆ. ರೈತರ ಭವಿಷ್ಯ ಉಜ್ವಲವಾಗಲಿದೆ ಎಂಬ ಉದ್ದೇಶದಿಂದ ₹50 ಲಕ್ಷ, ₹40 ಪರಿಹಾರಕ್ಕೆ ಒಪ್ಪಿಗೆ ಸೂಚಿಸಿದ್ದೆವು. ಆದರೆ ಸರ್ಕಾರದ ತೀರ್ಮಾನ ನಿರಾಸೆ ಮೂಡಿಸಿದೆ. ನಮ್ಮ ಬೇಡಿಕೆಯಂತೆ ಹೆಚ್ಚಿನ ದರ ಘೋಷಿಸಿ ಯುದ್ಧೋಪಾದಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ಪ್ರತಿ ವರ್ಷ ಜಮೀನು ಮೌಲ್ಯಕ್ಕೆ ಶೇ.20 ಏರಿಕೆ ಮಾಡಿ ಪರಿಹಾರ ನೀಡಬೇಕು.
- ಪಿ.ಎಚ್.ಪೂಜಾರ ವಿಧಾನ ಪರಿಷತ್ ಸದಸ್ಯರು, ಬಾಗಲಕೋಟೆಕೃಷ್ಣಾ ಮೇಲ್ದಂಡೆ ಯೋಜನೆ-3 ಮುಳುಗಡೆ ಜಮೀನಿಗೆ ಸೂಕ್ತ ಬೆಲೆ ಘೋಷಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ನೀರಾವರಿಗೆ ₹40 ಲಕ್ಷ ಹಾಗೂ ಒಣಬೇಸಾಯಕ್ಕೆ ₹30 ಲಕ್ಷ ಪರಿಹಾರ ಘೋಷಿಸಿ, ಕೃಷ್ಣೆಯ ಮಕ್ಕಳ ಕೂಗಿಗೆ ಮನ್ನಣೆ ನೀಡಿದಂತಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸೂಕ್ತ ಪರಿಹಾರಕ್ಕಾಗಿ ಹೋರಾಟ ಮಾಡಿದ್ದ ರೈತರು ಹಾಗೂ ಮುಖಂಡರಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳುವೆ.-ರಕ್ಷಿತಾ ಈಟಿ ಜಿಲ್ಲಾ ಅಧ್ಯಕ್ಷೆ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ