ವೈಭವದಿಂದ ನಡೆದ ಉಮಾ-ಮಹೇಶ್ವರ ಕಲ್ಯಾಣ ಮಹೋತ್ಸವ

KannadaprabhaNewsNetwork |  
Published : Oct 05, 2025, 01:00 AM IST
ಸಿಕೆಬಿ-2 ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ  ನಡೆದ  ಉಮಾ-ಮಹೇಶ್ವರ ಕಲ್ಯಾಣೋತ್ಸವದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ದಿವ್ಯ ಸಾನ್ನಿಧ್ಯ ವಹಿಸಿದ್ದರು | Kannada Prabha

ಸಾರಾಂಶ

ಮಾಂಗಲ್ಯ ಧಾರಣೆಯ ಸಮಯದಲ್ಲಿ ಮಹೇಶ್ವರನು ಉಮೆಯ ಕಂಠದಲ್ಲಿ ಮಾಂಗಲ್ಯವನ್ನು ಕಟ್ಟಿದ ಕ್ಷಣವು ಭಕ್ತರ ಮನಗಳನ್ನು ಮಂತ್ರಮುಗ್ಧಗೊಳಿಸಿತು. ಅಕ್ಷತಾರೋಪಣೆಯಲ್ಲಿ ಅಕ್ಷತೆಗಳನ್ನು ಸಮರ್ಪಿಸಿ ಆಶೀರ್ವಾದವನ್ನು ಕೋರುವ ಪವಿತ್ರ ಆಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ವೇದ ಗುರುಕುಲದ ಪವಿತ್ರ ಪರಿಸರದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿಯವರ ದಿವ್ಯ ಸಾನ್ನಿಧ್ಯದಲ್ಲಿ ಉಮಾಮಹೇಶ್ವರ ಕಲ್ಯಾಣ ಮಹೋತ್ಸವ ವೈಭವದಿಂದ ಜರುಗಿತು.

ಸಂಪ್ರದಾಯಬದ್ಧವಾಗಿ ನಡೆದ ಕಲ್ಯಾಣ ಮಹೋತ್ಸವನ್ನು ನೆರೆದ ಭಕ್ತರು ಶ್ರದ್ಧೆಯಿಂದ ಕಣ್ತುಂಬಿಕೊಂಡರು. ಕನ್ಯಾವರಣದಲ್ಲಿ ವರನ ಪಕ್ಷದವರು ಕನ್ಯಾದಾನಕ್ಕಾಗಿ ಕೋರುವ ಪವಿತ್ರ ಕ್ಷಣವೊಂದು ಇತ್ತು. ಬಳಿಕ ದೇವತಾ ಆಹ್ವಾನದ ಮೂಲಕ ಭಕ್ತಿಭಾವದೊಂದಿಗೆ ವೈವಾಹಿಕ ಕಾರ್ಯಗಳು ಆರಂಭವಾದವು. ಮಹಾ ಸಂಕಲ್ಪದ ಘೋಷಣೆಯಿಂದ ವಿವಾಹದ ಉದ್ದೇಶವು ಪ್ರಕಟವಾಯಿತು. ನಂತರ ಮಧುಪರ್ಕ ಪೂಜೆ ನೆರವೇರಿತು.

ಕನ್ಯಾದಾನದಲ್ಲಿ ಹಿಮವಂತನ ಪಾತ್ರವನ್ನು ಸ್ಮರಿಸುತ್ತಾ ಪವಿತ್ರ ಜಲಧಾರೆಯೊಂದಿಗೆ ಪುತ್ರಿಯನ್ನು ವರನಿಗೆ ಅರ್ಪಿಸುವ ದಿವ್ಯ ಸಂಪ್ರದಾಯ ನೆರವೇರಿಸಲಾಯಿತು. ಮಾಂಗಲ್ಯ ಧಾರಣೆಯ ಸಮಯದಲ್ಲಿ ಮಹೇಶ್ವರನು ಉಮೆಯ ಕಂಠದಲ್ಲಿ ಮಾಂಗಲ್ಯವನ್ನು ಕಟ್ಟಿದ ಕ್ಷಣವು ಭಕ್ತರ ಮನಗಳನ್ನು ಮಂತ್ರಮುಗ್ಧಗೊಳಿಸಿತು. ಅಕ್ಷತಾರೋಪಣೆಯಲ್ಲಿ ಅಕ್ಷತೆಗಳನ್ನು ಸಮರ್ಪಿಸಿ ಆಶೀರ್ವಾದವನ್ನು ಕೋರುವ ಪವಿತ್ರ ಆಚರಣೆ ನಡೆಯಿತು. ಮಹಾಮಂಗಳಾರತಿ, ರಾಜೋಪಚಾರ ಮತ್ತು ಸಂಗೀತ ಸೇವೆಗಳೊಂದಿಗೆ ಕಲ್ಯಾಣೋತ್ಸವ ವಿಧಿಗಳು ಸಂಪನ್ನಗೊಂಡವು.

ಈ ಸಂದರ್ಭದಲ್ಲಿ ಆಶೀರ್ಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಎಲ್ಲರ ತಂದೆಯಾದ ಮಹೇಶ್ವರ ಹಾಗೂ ಎಲ್ಲರ ತಾಯಿ ಉಮೆಯು ಇಲ್ಲಿಯೇ ವಾಸಿಸುತ್ತಿದ್ದಾರೆ. ಜಗತ್ತಿನ ತಂದೆ- ತಾಯಿಗಳಾದ ಈಶ್ವರ- ಪಾರ್ವತಿಯರು ನಮ್ಮ ಆಶ್ರಮಕ್ಕೆ ಬಂದಿದ್ದಾರೆ. ಅವರ ಕುಟುಂಬದಲ್ಲಿ ನಂದಿ, ಸರ್ಪ, ಇಲಿ, ನವಿಲು, ಸಿಂಹಗಳೂ ಇವೆ. ಒಂದು ಶಿಸ್ತು ಇಲ್ಲದಿದ್ದರೆ ಇವುಗಳ ಪರಿಸ್ಥಿತಿ ಏನಾಗಬಹುದು ಊಹಿಸಿ, ನಾವು ದೇವರ ಕುಟುಂಬ ಎನ್ನುವ ಭಾವ ನಮ್ಮಲ್ಲಿ ಸದಾ ಜಾಗೃತವಾಗಿದ್ದರೆ ನಮ್ಮ ಬದುಕು ಸುಧಾರಿಸುತ್ತದೆ. ಈ ದೇಗುಲದಲ್ಲಿ ಪ್ರಾಣಪ್ರತಿಷ್ಠಾಪನೆಯಾದ ನಂತರ ಇದು ಭೂ ಕೈಲಾಸವೇ ಆಗಲಿದೆ, ಶಿವ- ಪಾರ್ವತಿಯವರ ಆರಾಧನೆಯು ನಿರಂತರವಾಗಿರಬೇಕು ಎಂದು ಮಾರ್ಗದರ್ಶನ ನೀಡಿದರು.

ಶ್ರದ್ಧೆಯಿಂದ ನಡೆಸಲಾದ ಈ ಎಲ್ಲ ಆಚರಣೆಗಳಿಂದ ಪರಮಾತ್ಮನು ಸಂಪ್ರೀತನಾಗಿದ್ದಾನೆ. ಜಗತ್ತಿನ ಎಲ್ಲ ಒಳ್ಳೆಯ ಜನರು ಸುರಕ್ಷಿತವಾಗಿರಲಿ. ಇಡೀ ಜಗತ್ತು ಸಂತೋಷವಾಗಿರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’