ಉಮೇಶ ಮುಂಡಳ್ಳಿಯವರ ಅಯೋಧ್ಯೆ ಶ್ರೀರಾಮ ಭಕ್ತಿ ಗೀತೆ ಅಲ್ಬಂ ಬಿಡುಗಡೆ

KannadaprabhaNewsNetwork | Published : Jan 22, 2024 2:17 AM

ಸಾರಾಂಶ

ಅಯೋಧ್ಯಾ ಶ್ರೀ ರಾಮ ಮಂದಿರ ಲೋಕಾರ್ಪಣೆಯ ಪ್ರಯುಕ್ತ ಉಮೇಶ ಮುಂಡಳ್ಳಿ ಅವರ ಅಯೋಧ್ಯಾ ಪ್ರಭು ಶ್ರೀ ರಾಮ ಎನ್ನುವ ಭಕ್ತಿ ಗೀತೆ ಅಲ್ಬಂನ್ನು ಭಟ್ಕಳದಲ್ಲಿ ಬಿಡುಗಡೆ ಮಾಡಲಾಯಿತು. ಇದರಲ್ಲಿ ಶ್ರೀರಾಮನ ಕುರಿತು ನಾಲ್ಕು ಹಾಡುಗಳಿವೆ.

ಭಟ್ಕಳ: ಅಯೋಧ್ಯಾ ಶ್ರೀ ರಾಮ ಮಂದಿರ ಲೋಕಾರ್ಪಣೆಯ ಪ್ರಯುಕ್ತ ಉಮೇಶ ಮುಂಡಳ್ಳಿ ಅವರ ಅಯೋಧ್ಯಾ ಪ್ರಭು ಶ್ರೀ ರಾಮ ಎನ್ನುವ ಭಕ್ತಿ ಗೀತೆ ಅಲ್ಬಂನ್ನು ಚೌತನಿಯ ಕುದುರೆ ಬೀರಪ್ಪ ಮುಖ್ಯ ಪ್ರಾಣ ದೇವಸ್ಥಾನದಲ್ಲಿ ಸತ್ಯ ಸಾಯಿ ಸೇವಾ ಸಮಿತಿಯ ಸಂಚಾಲಕ ಆರ್. ಭಾಸ್ಕರ್ ನಾಯ್ಕ ಅವರು ಬಿಡುಗಡೆಗೊಳಿಸಿದರು.

ಈ ಅಲ್ಬಂನಲ್ಲಿ ಶ್ರೀ ರಾಮನ ಕುರಿತಾದ ನಾಲ್ಕು ಹಾಡುಗಳಿದ್ದು, ಎಂತಹ ಸೊಬಗದು ಸುಂದರ ಭವ್ಯ ಶ್ರೀ ರಾಮ ಮಂದಿರ, ಹಾಗೂ ರಾಮ ರಾಮ ಎನ್ನಿರೋ ಎರಡು ಸಾಹಿತ್ಯ ಉಮೇಶ ಮುಂಡಳ್ಳಿ ಅವರದ್ದಾಗಿದ್ದು, ಅಯೋಧ್ಯೆಯಲ್ಲಿ ನಿನ್ನ ದಿವ್ಯ ಮಂದಿರ, ಇದರ ಸಾಹಿತ್ಯ ಅಶ್ವಿನಿ ಕೋಡಿಬೈಲು ಸುಳ್ಯದವರದಾಗಿದ್ದರೆ, ಶ್ರೀ ರಾಮನ ಪೂಜೆಯಲ್ಲಿ ಅಯೋಧ್ಯೆ ಮೀಯುತಿಹುದು ಈ ಗೀತೆ ಹುಬ್ಬಳ್ಳಿಯ ಡಾ. ಶ್ರೀಶೈಲ ಮಾದಣ್ಣನವರ ಅವರದ್ದಾಗಿದೆ. ಈ ನಾಲ್ಕು ಗೀತೆಗಳನ್ನು ಉಮೇಶ ಮುಂಡಳ್ಳಿ ಅವರು ಸ್ವರ ಸಂಯೋಜನೆ ಮಾಡಿ ಹಾಡಿದ್ದಾರೆ. ಗೀತೆಗೆ ವಾದ್ಯ ಸಂಯೋಜನೆ ವಿನಾಯಕ ದೇವಾಡಿಗ, ತಬಲ ಆದಿತ್ಯ ದೇವಾಡಿಗ ಹಾಗೂ ಕೀಬೋರ್ಡ್ ವಿಘ್ನೇಶ ಗೌಡ ನುಡಿಸಿದ್ದಾರೆ.

ಕುದುರೆ ಬೀರಪ್ಪ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಆಸರಕೇರಿ ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಯಶೋಧರ ನಾಯ್ಕ, ವೆಂಕಟೇಶ ನಾಯ್ಕ, ಆದಿತ್ಯ ದೇವಾಡಿಗ ನಿನಾದ ಹಾಗೂ ಉತ್ಥಾನ ಹಾಜರಿದ್ದರು. ಶಿಕ್ಷಕಿ ಸವಿತಾ ನಾಯ್ಕ ನಿರ್ವಹಿಸಿದರು.

ವಿಶೇಷ ಪೂಜೆ:

ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ದೀಪೋತ್ಸವ, ಅನ್ನದಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಕುದ್ರೆಬೀರಪ್ಪ ಹಾಗೂ ಶ್ರೀ ಹನುಮಂತ ದೇವಸ್ಥಾನದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಜ. ೧೮ರಂದೇ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಜ. ೨೨ರ ತನಕ ನಡೆಯುತ್ತಿರುವುದು ಅತ್ಯಂತ ವಿಶೇಷವಾಗಿದೆ. ಮುರ್ಡೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ರಾಮ ತಾರಕ ಹೋಮ, ರಾತ್ರಿ 8 ಗಂಟೆಯಿಂದ ರಾಮೋತ್ಸವ, ಸುಂದರ ರಾಮೇಶ್ವರ ದೇವಸ್ಥಾನದಿಂದ ಓಲಗ ಮಂಟಪದ ವರೆಗೆ ಬೃಹತ್ ಮೆರವಣಿಗೆ, ದೀಪೋತ್ಸವ, ರಾಮ ಪೂಜೆ ನಡೆಯಲಿದೆ. ಮಾರುಕೇರಿ ಹೂತ್ಕಳದ ಶ್ರೀ ಧನ್ವಂತರಿ ದೇವಸ್ಥಾನದಲ್ಲಿ ರಾಮತಾರಕ ಯಜ್ಞ, ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಣಣೆ ಏರ್ಪಡಿಸಲಾಗಿದೆ.

Share this article