ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಹಳೇಗನ್ನಡ ಭಾಷೆಯ ಶಾಸನ ಪತ್ತೆಯಾಗಿದ್ದು, ಮೈಸೂರು ಮಹಾರಾಜ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳು ಬೆಳಕಿಗೆ ತಂದಿದ್ದಾರೆ.ಗ್ರಾಮದಲ್ಲಿ ಮೈಸೂರು ಮಹಾರಾಜ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ, ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಅಧಿಕಾರಿಗಳಾದ ಡಾ.ಎಸ್. ಕೃಷ್ಣಪ್ಪ ಮತ್ತು ಡಾ.ಪಿ.ಎಸ್. ಮಧುಸೂದನ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಗ್ರಾಮದ ಹೊರವಲಯದಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಶ್ರಮದಾನ ಮಾಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳ ತಂಡದೊಂದಿಗೆ ಎನ್ಎಸ್ಎಸ್ ಶಿಬಿರದ ಅಧಿಕಾರಿಗಳಾದ ಡಾ.ಎಸ್. ಕೃಷ್ಣಪ್ಪ ಮತ್ತು ಡಾ.ಪಿ.ಎಸ್. ಮಧುಸೂದನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಮಹದೇಶ್ವರನ ದೇವಾಲಯದ ಸಮೀಪದಲ್ಲೇ ಜಮೀನಿನೊಂದರಲ್ಲಿ ಚಪ್ಪಡಿ ಕಲ್ಲಿನ ಆಕಾರದಲ್ಲಿ ಶಾಸನ ಪತ್ತೆಯಾಗಿದೆ. ಇದು ಸುಮಾರು 5 ಅಡಿ ಉದ್ದ, 3 ಅಡಿ ಅಗಲವಾಗಿದ್ದು, ಶಾಸದ ಮೇಲಿನ ಭಾಗದಲ್ಲಿ ಲಿಂಗದ ಚಿತ್ರವನ್ನು ಕೆತ್ತಲಾಗಿದೆ. ಶಾಸನ 25 ಸಾಲಿನಿಂದ ಕೂಡಿದ್ದು, ಹಳಗನ್ನಡದಲ್ಲಿದೆ. ಕೆಲವು ಕಡೆ ಅಕ್ಷರಗಳು ಅಳಿಸಿಹೋಗಿವೆ ಎಂದು ಮಹಾರಾಜ ಕಾಲೇಜಿನ ಎನ್ಎಸ್ಎಸ್ ಶಿಬಿರಾಧಿಕಾರಿಗಳಾದ ಡಾ.ಎಸ್. ಕೃಷ್ಣಪ್ಪ ಮತ್ತು ಡಾ.ಪಿ.ಎಸ್ ಮಧುಸೂಧನ್ ತಿಳಿಸಿದ್ದಾರೆ.ಲಿಪಿಯ ಆಧಾರದ ಮೇಲೆ ಇದನ್ನು ಕ್ರಿ.ಶ 15 ಅಥವಾ 17ನೇ ಶತಮಾನದ ಉಮ್ಮತ್ತೂರು ಪಾಳ್ಯ ಗಾರರು ಅಥವಾ ಮೈಸೂರು ಮಹಾರಾಜರ ಕಾಲದ ಶಾಸನವೆಂದು ಶಂಕಿಸಲಾಗಿದೆ. ಅಲ್ಲದೆ ಭೂಮಿ ಅಥವಾ ಗ್ರಾಮವನ್ನು ದಾನವಾಗಿ ನೀಡಿರುವ ಶಾಸನವಾಗಿದೆ ಎಂದು ಹೇಳಬಹುದಾಗಿದೆ.ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಶಾಸನವನ್ನು ಓದಿ ಶಾಸನದ ಮಹತ್ವ ಮತ್ತು ಚುಂಚನಹಳ್ಳಿ ಗ್ರಾಮದ ಇತಿಹಾಸವನ್ನು ತಿಳಿಸಬೇಕು. ಈ ಶಾಸನವನ್ನು ಸಂರಕ್ಷಣೆ ಮಾಡಬೇಕು ಎಂದು ಮಹಾರಾಜ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಮಾನವಿ ಮಾಡಿದ್ದಾರೆ.ಶಿಬಿರಾಧಿಕಾರಿಗಳಾದ ಡಾ.ಎಸ್.ಕೃಷ್ಣಪ್ಪ , ಡಾ.ಪಿ.ಎಸ್. ಮಧುಸೂದನ್, ಶಿಬಿರಾರ್ಥಿಗಳಾದ ಭಾರ್ಗವ್, ಭಾಗ್ಯ, ವನಜಾಕ್ಷಿ, ಮೋಹನ್ ಸೇರಿದಂತೆ 80ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.