ಕನ್ನಡಪ್ರಭವಾರ್ತೆ ತುರುವೇಕೆರೆ
ರೈತಾಪಿಗಳು ನಂದಿನಿ ಹಾಲು ಶೇಖರಣಾ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ಹಾಲು ನೀಡುವ ಮುಖೇನ ಹೆಚ್ಚು ದರವನ್ನು ಪಡೆಯಿರಿ ಎಂದು ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೈನುಗಾರರಿಗೆ ಹೇಳಿದರು. ತಾಲೂಕಿನ ಗುರುವಿನಮಠದಲ್ಲಿ ನೂತನವಾಗಿ ಪ್ರಾರಂಭಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಾಗೂ ಹಾಲು ಶೇಖರಣಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಒಂದು ಲೀಟರ್ ನೀರಿನ ಬೆಲೆಗೆ ಹಾಲನ್ನು ಕೊಳ್ಳಲಾಗುತ್ತಿತ್ತು. ಆದರೆ ಇಂದು ಪ್ರತಿ ಲೀಟರ್ ಹಾಲಿನ ದರ ಕನಿಷ್ಠ 35 ರು.ನಿಂದ ಗರಿಷ್ಠ 55 ರು. ತನಕ ಇದೆ. ಜಿಲ್ಲೆಯಲ್ಲಿ ಒಟ್ಟು 1340 ಹಾಲು ಉತ್ಪಾದಕರ ಸಹಕಾರ ಸಂಘ ಇದೆ. ಇವುಗಳಿಂದ ಪ್ರತಿ ದಿನ 9,36 ಲಕ್ಷ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಇದರಲ್ಲಿ ತುಮಕೂರು, ಬೆಂಗಳೂರಿನಲ್ಲಿ ಸುಮಾರು 3.60 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಒಂದು ಲಕ್ಷ ಲೀಟರ್ ಮೊಸರು ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ್ ಸೇರಿದಂತೆ ದೇಶದ ವಿವಿಧೆಡೆ ಜಿಲ್ಲೆಯ ನಂದಿನಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಉಳಿದ ಹಾಲನ್ನು ಪಾಡರ್ ಆಗಿ ಮಾರ್ಪಡಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು. ಪ್ರತಿ ತಿಂಗಳು ಜಿಲ್ಲೆಯ ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟದಿಂದ ಸುಮಾರು 80 ಕೋಟಿ ಹಣ ನೀಡಲಾಗುತ್ತಿದೆ. ತಾಲೂಕಿನಿಂದ ಸುಮಾರು 84 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಹಾಲು ಒಕ್ಕೂಟ ಆರ್ಥಿಕವಾಗಿ ಸಧೃಢವಾಗಿದೆ. ಸದ್ಯ ಸುಮಾರು 122 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಇಡಲಾಗಿದೆ ಎಂದರು. ಜಿಲ್ಲೆಯಲ್ಲಿ ಮಹಿಳಾ ಘಟಕಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಅವರಲ್ಲಿ ದಕ್ಷತೆ ಹೆಚ್ಚಿದೆ. ಮಹಿಳಾ ಘಟಕಗಳ ಅಭಿವೃದ್ಧಿಗಾಗಿ ಹಾಲು ಒಕ್ಕೂಟದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಮಹಿಳಾ ಸದಸ್ಯರಿಗೆ ಹೈನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಸಿ.ವಿ.ಮಹಲಿಂಗಪ್ಪ ಹೇಳಿದರು. ತಾಲೂಕು ಮುಖ್ಯಸ್ಥ ಎಸ್.ಮಂಜುನಾಥ್ ಮಾತನಾಡಿ ರಾಸುಗಳಿಗೆ ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ನೀಡಬೇಕು. ನಂದಿನಿ ಹಾಲು ಘಟಕದಲ್ಲಿ ಹೈನುಗಾರರಿಗೆ ಸಾಕಷ್ಟು ಅನುಕೂಲಗಳಿವೆ. ರೈತರ ಹಸುಗಳನ್ನು ಸಾಕುವುದರಿಂದ ಹಿಡಿದು ಅದರ ಜೀವಕ್ಕೆ ಅಪಾಯ ಬಂದರೂ ಸಹ ಅವುಗಳ ಮಾಲೀಕರ ರಕ್ಷಣೆಗೆ ಬದ್ಧವಾಗಿದೆ ಎಂದರು. ಪ್ರತಿಯೊಬ್ಬ ಹೈನುಗಾರರೂ ತಮ್ಮ ರಾಸುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು. ಹಾಲು ಒಕ್ಕೂಟದಿಂದಲೇ ವಿಮೆಯನ್ನು ಉಚಿತವಾಗಿ ಮಾಡಲಾಗುವುದು. ವಿಮೆ ಹಣವನ್ನು 30 ಸಾವಿರದಿಂದ 70 ಸಾವಿರ ರುಗಳ ವರೆಗೂ ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂಧರ್ಭದಲ್ಲಿ ಹಾಲು ಒಕ್ಕೂಟದ ವಿಸ್ತೀರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್, ಗುರುವಿನ ಮಠದ ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಜಗದೀಶ್, ಉಪಾಧ್ಯಕ್ಷೆ ಶೋಭಾ ರಂಗೇಗೌಡ, ಸದಸ್ಯರಾದ ಪ್ರೇಮಲತಾ ಈಶ್ವರೇಗೌಡ, ವೀಣಾ ಪರಮೇಶ್, ಅನುಸೂಯಾ ನಾಗರಾಜು, ಮಮತ ಪುಟ್ಟೇಗೌಡ, ಸುಲೋಚನಾ ದಾನೇಗೌಡ, ಮಮತ ಲಕ್ಷ್ಮಣಗೌಡ, ಕೆಂಪಮ್ಮ ಕುಮಾರ್, ಲತಾ ಶೇಖರಪ್ಪ, ಕಾವ್ಯ ಚನ್ನೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಛಾಯಾಮಣಿ ಈಶ್ವರ್, ಗ್ರಾಮ ಪಂಚಾಯಿತಿ ಸದಸ್ಯ ಎಂ.ಆರ್.ಕುಮಾರ್, ಸಂಘದ ಕಾರ್ಯದರ್ಶಿ ವಿಜಯಲಕ್ಷ್ಮಿ ನವೀನ್ ಕುಮಾರ್, ಸಹಾಯಕಿ ಅನಿತಾ ಲೋಕೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ, ಜಿ.ಆರ್.ಗಂಗಾಧರಯ್ಯ, ಪ್ರೇಮಲತಾ, ಕೆ ಆರ್ ಎಸ್ ಪಕ್ಷದ ಕೃಷ್ಣಮೂರ್ತಿ ಸೇರಿದಂತೆ ಹಲವಾರು ಮಂದಿ ಇದ್ದರು. ಧರಣೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.