ಕನ್ನಡ ಪ್ರಭ ವಾರ್ತೆ ಮುಧೋಳ
ಭಾನುವಾರ ಸಂಜೆ ಮುಧೋಳ ಪಿಡಬ್ಲೂಡಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಕಬ್ಬು ಹೋರಾಟಗಾರ ಮುಖಂಡರ ಜೊತೆಗೆ ಎರಡು ಸಲ ಪ್ರತ್ಯೇಕ ಸಭೆ ನಡೆಸಿದರೂ ಕಬ್ಬಿನ ಬೆಲೆ ನಿಗದಿ ಪಡಿಸುವಲ್ಲಿ ಸಂಧಾನ ವಿಫಲವಾಗಿ ಕಬ್ಬು ಬೆಳೆಗಾರರ ಹೋರಾಟ ಮುಂದುವರಿಯಿತು.ಬೆಂಗಳೂರಿನಲ್ಲಿ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಪ್ರಸಕ್ತ ಸಾಲಿಗೆ ಕಬ್ಬಿನ ರಿಕವರಿ ಆಧಾರದ ಮೇಲೆ ಪ್ರತಿ ಟನ್ ಗೆ ₹3300 ಬೆಲೆನಿಗದಿಪಡಿಸಿದ್ದು, ಇದನ್ನು ನಾವು ಒಪ್ಪುವುದಿಲ್ಲ. ನಮಗೆ ಏಕರೂಪ ಬೆಲೆ ನೀಡಬೇಕು, ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಬೆಲೆ ನಿಗದಿಪಡಿಸಿರುವುದು ಕಾರ್ಖಾನೆಯ ಮಾಲೀಕರ ಪರವಾಗಿದೆ. ರಿಕವರಿ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಪಡಿಸಿರುವುದರಲ್ಲಿ ಸಂಪೂರ್ಣ ಮೋಸವಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ₹3500 ದರ ನೀಡಬೇಕು, ಜೊತೆಗೆ ಹಿಂದಿನ ಎಲ್ಲ ಬಾಕಿ ಹಣವನ್ನು ನೀಡಬೇಕೆಂದು ರೈತ ಮುಖಂಡರು ಹೇಳಿ ಸಭೆಯಿಂದ ನಿರ್ಗಮಿಸಿದರು.
ಸರ್ಕಾರ ಕಬ್ಬಿನ ಬೆಲೆ ಏನು ನೀಡಬೇಕೆಂಬುದು ಈಗಾಗಲೇ ಸುತ್ತೊಲೆ ಹೊರಡಿಸಿದೆ. ಅದರ ಪ್ರಕಾರ ನಾವು ಬೆಲೆ ಕೊಡಲು ಸಿದ್ಧರಿದ್ದೇವೆ. ಹೆಚ್ಚಿನ ಬೆಲೆ ಕೊಡಲು ನಮ್ಮಿಂದ ಸಾಧ್ಯವೇ ಇಲ್ಲ ಎಂದು ಕಾರ್ಖಾನೆಯ ಮಾಲೀಕರು ಸಭೆಯಿಂದ ಹೊರನಡೆದರು.ಕಾರ್ಖಾನೆಯ ಮಾಲೀಕರ ಹಾಗೂ ರೈತ ಮುಖಂಡರ ಸಂಧಾನ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಬ್ಬರೊಂದಿಗೂ ಸಭೆ ನಡೆಸಿದರೂ ಫಲಪ್ರದವಾಗಿಲ್ಲ. ರೈತರು ಮತ್ತು ಕಾರ್ಖಾನೆಯವರು ಸಹಕಾರ, ಸಹನೆ, ಸೌಹಾರ್ದದಿಂದ ನಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಶಾಂತಿಗೆ ಅವಕಾಶ ನೀಡಬಾರದು. ರೈತ ಮುಖಂಡರು ಮತ್ತು ಕಾರ್ಖಾನೆಯ ಮಾಲೀಕರು ಮಾತುಕತೆ ನಡೆಸಿ ಒಳ್ಳೆಯ ನಿರ್ಧಾರಕ್ಕೆ ಬರಬೇಕು. ಸರಿಯಾದ ಸಮಯಕ್ಕೆ ಕಬ್ಬು ಪೂರೈಕೆ ಆಗದೆ ಹೋದರೆ ರೈತರು ಹೆಚ್ಚಿಗೆ ಲಗಾನಿ ನೀಡಬೇಕಾಗುತ್ತದೆ ಎಂದು ಹೇಳಿದ ಸಚಿವರು, ಕಾಂಗ್ರೆಸ್ ಸರ್ಕಾರ ಯಾವತ್ತೂ ರೈತ ಪರವಾಗಿದ್ದು, ರೈತರ ಹಿತವನ್ನೇ ಕಾಪಾಡುತ್ತಾ ಬಂದಿದೆ ಎಂದು ಹೇಳಿದರು.
ಕಾರ್ಖಾನೆಯ ಮಾಲೀಕರ ಮೊಂಡುತನ ಬಿಟ್ಟು ರೈತರ ಜೊತೆ ಮಾತನಾಡಿ, ಕಬ್ಬಿಗೆ ಸೂಕ್ತ ಬೆಲೆ ನೀಡಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ನಮ್ಮ ಹೋರಾಟ ಉಗ್ರ ಸ್ವರೂಪ ತಾಳುತ್ತದೆ. ಇದಕ್ಕೆ ಜಿಲ್ಲಾಡಳಿತವೆ ಹೊಣೆ ಹೊರಬೇಕಾಗುತ್ತದೆ ಎಂದು ಹೋರಾಟಗಾರರ ಮುಖಂಡರಾದ ಬಸವಂತಪ್ಪ ಕಾಂಬಳೆ, ಈರಪ್ಪ ಹಂಚಿನಾಳ ತಿಳಿಸಿದ್ದಾರೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರ ಸಂಘದ ನೇತೃತ್ವ ದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಮುಧೋಳ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದ್ದು, ರೈತರು ತಮ್ಮ ತಮ್ಮ ಊರುಗಳಲ್ಲಿ ಡಂಗೂರ ಸಾರಿ ಸಾವಿರಾರು ಜನ ಸೇರುವಂತೆ ವಿನಂತಿಸಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ಡಿಸಿ, ಎಸ್ಪಿ, ಪುಡ್ ಡಿಡಿ, ತಹಸೀಲ್ದಾರ, ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.