ಅವಿರೋಧ ಆಯ್ಕೆ ಒಗ್ಗಟ್ಟಿನ ಪ್ರತೀಕ: ರಾಮೋಜಿಗೌಡ

KannadaprabhaNewsNetwork |  
Published : Jul 06, 2026, 02:00 AM IST
ಫೋಟೋ | Kannada Prabha

ಸಾರಾಂಶ

ರಾಮನಗರ: ಒಗ್ಗಟಿದ್ದರೆ ಮಾತ್ರ ಒಂದು ಸಂಘಟನೆ ಯಶಸ್ವಿಯಾಗಲು ಸಾಧ್ಯವಿದ್ದು, ಅವಿರೋಧ ಆಯ್ಕೆಗಳು ಒಗ್ಗಟ್ಟಿನ ಪ್ರತೀಕವಾಗಿದೆ. ಆಂತರಿಕ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತಷ್ಟು ಪ್ರಗತಿ ಕಾಣಲು‌ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅಭಿಪ್ರಾಯಪಟ್ಟರು

ರಾಮನಗರ: ಒಗ್ಗಟಿದ್ದರೆ ಮಾತ್ರ ಒಂದು ಸಂಘಟನೆ ಯಶಸ್ವಿಯಾಗಲು ಸಾಧ್ಯವಿದ್ದು, ಅವಿರೋಧ ಆಯ್ಕೆಗಳು ಒಗ್ಗಟ್ಟಿನ ಪ್ರತೀಕವಾಗಿದೆ. ಆಂತರಿಕ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತಷ್ಟು ಪ್ರಗತಿ ಕಾಣಲು‌ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅಭಿಪ್ರಾಯಪಟ್ಟರು.

ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ, ಉತ್ತರ‌ ಹಾಗೂ ಗ್ರಾಮಾಂತರ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಈ ಅವಿರೋಧ ಆಯ್ಕೆ ಶಿಕ್ಷಕರ ಒಗ್ಗಟ್ಟನ್ನು ತೋರಿಸುವ ಜತೆಗೆ ಸರ್ಕಾರಕ್ಕೆ ಒಂದು ಸಂದೇಶವನ್ನು ತಲುಪಿಸಿದೆ ಎಂದರು.

ಬೆಂಗಳೂರು ನಗರ ಜಿಲ್ಲೆಗೆ ಸೀಮಿತವಾಗಿರುವ ಶಿಕ್ಷಕರ ಪತ್ತಿನ ಸಹಕಾರ ಸಂಘವನ್ನು ಬೆಂ.ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲೆಗೂ ವಿಸ್ತರಿಸಲಾಗುವುದು. ಹಣದ ಅವಶ್ಯಕತೆ ಇರುವ ಶಿಕ್ಷಕರು ಹೆಚ್ಚಿನ ಬಡ್ಡಿಗೆ ಖಾಸಗಿಯವರ ಬಳಿ ಹಣ ಪಡೆಯುವ ಬದಲು ನಮ್ಮದೇ ಸಹಕಾರ ಸಂಘವನ್ನು ಸದುಪಯೋಗ ಪಡೆಯಬಹುದು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ/ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದಿಂದ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡುತ್ತಿದ್ದೇವೆ. ಚನ್ನಪಟ್ಟಣದಲ್ಲಿ ಅತ್ಯುತ್ತಮ ಬಡಾವಣೆ ನಿರ್ಮಾಣ ಮಾಡುತ್ತಿದ್ದೇವೆ. ಪ್ರತಿ ಚದರಡಿಗೆ 5 ಸಾವಿರ ರು. ಬೆಲೆ ಬಾಳುವ ನಿವೇಶನಗಳನ್ನು 4,100 ರು.ಗಳಿಗೆ ನೀಡಲಾಗುತ್ತಿದೆ. ಶಿಕ್ಷಕ ವೃಂದ ಇದರ ಪ್ರಯೋಜನ ಪಡೆಯಬೇಕು ಎಂದರು.

ನಾವು ಮಕ್ಕಳ ಋಣದಲ್ಲಿ ಬದುಕುತ್ತಿದ್ದೇವೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಎಂತದ್ದೇ ತೊಂದರೆ ಎದುರಾದರೂ ನಾವು ನಿಮ್ಮ ಜತೆಗೆ ಇರುತ್ತೇವೆ. ದಿನದ 24 ಗಂಟೆ ಕರೆ ಮಾಡಿದರೂ ನಾನು ಕರೆ ಸ್ವೀಕರಿಸುತ್ತೇನೆ. ನಿಮ್ಮ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ರಾಮೋಜಿಗೌಡ ಆಶ್ವಾಸನೆ ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನುಗ್ಗಲಿ ಮಾತನಾಡಿ, ಶಿಕ್ಷಕರ ದಿನಾಚರಣೆಗೂ ಮುನ್ನ ಪದವಿ ಮುಗಿಸಿರುವ 56 ಸಾವಿರ ಮಂದಿ ಶಿಕ್ಷಕರಿಗೆ ಪದೋನ್ನತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರತಿ ನಿತ್ಯ ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ದರ ಏರಿಕೆಯಾದರೆ ಶಿಕ್ಷಕರು ತಮ್ಮ ಜೇಬಿನಿಂದ ಹಾಕಬೇಕಾದ ದುಃಸ್ಥಿತಿ ಇದೆ. ಇದನ್ನು ತಪ್ಪಿಸಲು ಮೊಟ್ಟೆ ದರವನ್ನು ಹೆಚ್ಚಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದರ ಏರಿಕೆ ಆದೇಶ ಶೀಘ್ರ ಹೊರ ಬೀಳಲಿದೆ. ಎಲ್‌ಕೆಜಿ ಇಂದ ಪಿಯುಸಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ನೆರಡು ತಿಂಗಳಲ್ಲಿ ಉಚಿತ ನೋಟ್‌ಬುಕ್ ವಿತರಣೆ ಮಾಡಲಾಗುವುದು ಎಂದರು.

ರಾಜ್ಯದ ಎಲ್ಲಾ ಶಾಲೆಗಳಿಗೂ ಉಚಿತ ಇಂಟರ್‌ನೆಟ್ ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆಫ್‌ಲೈನ್ ಮುಲಕ ಕ್ಯಾಮ್ಸ್ ಹಾಜರಾತಿಗೆ ಮನವಿ ಮಾಡಲಾಗಿದೆ. ಶಿಕ್ಷಕರನ್ನು ಸಂಘಟಿಸಲು ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಂಘಗಳ ಪದಾಧಿಕಾರಿಗಳಿಗೆ ಶಾಶ್ವತ ಒಒಡಿ ವ್ಯವಸ್ಥೆ ಕಲ್ಪಿಸಲು ಮನವಿ ಸಲ್ಲಿಸಲಾಗಿದೆ ಎಂದರು.

ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ರಜೆಯನ್ನು ಶಿಕ್ಷಕರಿಗೂ ವಿಸ್ತರಿಸಬೇಕು. ಇದಕ್ಕೆ ಇಲಾಖೆ ಜಂಟಿ ಕಾರ್ಯದರ್ಶಿ ರಶ್ಮಿ ಮಹೇಶ್ ಅವರೂ ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ. ತಮಿಳುನಾಡು ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ವಾರದಲ್ಲಿ ಐದು ದಿನಗಳು ಮಾತ್ರವೇ ತರಗತಿಗಳು ನಡೆಯುತ್ತಿವೆ. ನಮ್ಮ ರಾಜ್ಯದಲ್ಲೂ ಇದೇ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ನಿಕಟಪೂರ್ವ ಅಧ್ಯಕ್ಷ ರಮೇಶ್ ಅವರು ‌ನೂತನ ಅಧ್ಯಕ್ಷರಾದ ಎಚ್.ಹನುಮಯ್ಯ‌‌ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಮೈಸೂರು ಜಿಲ್ಲಾಧ್ಯಕ್ಷ ಶಶಿ, ಬಿಇಒ ಸೋಮಲಿಂಗಯ್ಯ, ರಾಮಲಿಂಗಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ್, ರಾಮನಗರ ತಾಲ್ಲೂಕು ಅಧ್ಯಕ್ಷ ಬಸವೇಗೌಡ ಮಾಗಡಿ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಎಂ.ಕೃಷ್ಣ, ಕನಕಪುರ ತಾಲ್ಲೂಕು ಅಧ್ಯಕ್ಷ ಹೆಚ್.ವಿ.ಚಂದ್ರಶೇಖರ್, ‌ಸಂಘಟನೆಯ ಪ್ರಮುಖರಾದ ರಾಜಶೇಖರ್, ಜಯರಾಮ್, ಬಸವರಾಜ್, ವಿಷಕಂಠಯ್ಯ, ರಂಗಸ್ವಾಮಯ್ಯ, ಮೂರ್ತಿ, ಮಂಜುಳಾ, ಯೋಗಿತ, ಕವಿತ, ವಾಸುದೇವ ಗಿರೀಶ್, ಮಂಜುನಾಥ್, ಪ್ರಭಾಕರ್ ಸೇರಿದಂತೆ ಹಲವರು ಇದ್ದರು.

(ಫೋಟೋ ಕ್ಯಾಪ್ಞನ್‌)

ರಾಮನಗರದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬೆಳಗಾವಿಗೆ ಆರ್‌ಎಸ್‌ಎಸ್‌ಸರಸಂಘಚಾಲಕ ಭಾಗವತ್‌
ಕಡೂರು ತಾಲೂಕು ಕಚೇರಿಗೆ ರಾಜೇಂದ್ರಕುಮಾರ್ ಕಠಾರಿಯಾ ಭೇಟಿ