ಚಿತ್ರದುರ್ಗ: ಎನ್‍ಎಚ್‍ಎಂ ಅಡಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐವರು ಎನ್‌ಎಚ್‌ಎಂ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸೊಸೈಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಿಇಒ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೊಸೈಟಿ ಸಭೆ ಹಾಗೂ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಪ್ರಸ್ತಾವನೆ ಮಂಡಿಸಿದಾಗ ಅನುಮೋದಿಸಲಾಯಿತು.ಚಳ್ಳಕೆರೆ ತಾಲೂಕು ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಘಟಪರ್ತಿ ಉಪಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹಾಲಕ್ಷ್ಮೀ, ಹಿರಿಯೂರು ತಾಲೂಕು ಬೇತೂರು ಪಾಳ್ಯ ಉಪಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲತಾ, ಚಳ್ಳಕೆರೆ ತಾಲೂಕು ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಕೆ.ಸಿ.ಅಶ್ವಿನಿ, ದೊಡ್ಡಚೆಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಟಿ.ಜಯಲಕ್ಷ್ಮೀ ಹಾಗೂ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ಆರ್.ಲಕ್ಷ್ಮೀದೇವಿ ವಜಾಗೊಂಡ ಸಿಬ್ಬಂದಿಯಾಗಿದ್ದಾರೆ.ಸಿಇಒ ಸೋಮಶೇಖರ್ ಮಾತನಾಡಿ, ಆರೋಗ್ಯ ಕಾರ್ಯಕ್ರಮಗಳ ಕುರಿತು ಜನರಿಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಬೇಕು. ಈ ಬಗ್ಗೆ ಉದಾಸಿನ ಬೇಡ. ಯೋಜನೆಯ ಲಾಭ ಫಲಾನುಭವಿಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತರು ಉತ್ತಮವಾಗಿ ಸೇವೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಶಾ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವರಿಗೆ ಸಿಇಓ ಸೂಚಿಸಿದರು.