ಆಸ್ಪತ್ರೆ ಎದುರು ಅನಧೀಕೃತವಾಗಿ ತಲೆಯೆತ್ತಿರುವ ಮಾಂಸದಂಗಡಿಗಳು

KannadaprabhaNewsNetwork |  
Published : Feb 05, 2026, 02:00 AM IST
ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಸೂಚನಾ ಫಲಕದ ಪಕ್ಕದಲ್ಲೇ ಅನಧಿಕೃತ ಮಾಂಸದ ಅಂಗಡಿಗಳು ತಲೆ ಎತ್ತಿರುವುದು. | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿ ಕಚೇರಿಯು ಕೇವಲ 300 ಮೀಟರ್ ದೂರದಲ್ಲಿದ್ದರೂ, ಪಿಡಿಒ ಸೇರಿದಂತೆ ಯಾವುದೇ ಅಧಿಕಾರಿಗಳು ಈ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ.

ಡಿವಿ ರಮೇಶ್ ಕುಮಾರ್

ಕನ್ನಡಪ್ರಭ ವಾರ್ತೆ ಚೇಳೂರುತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ರಸ್ತೆ ಪಕ್ಕದ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಮಾಂಸದ ಅಂಗಡಿಗಳಿಂದ ಸಾರ್ವಜನಿಕರ ಸಂಚಾರಕ್ಕೆ ಮತ್ತು ರೋಗಿಗಳ ಆರೋಗ್ಯಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಡಿಗೆ ಆಸೆಗೆ ಸಾರ್ವಜನಿಕರ ಹಿತ ಬಲಿ:

ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಮಾಂಸದ ಅಂಗಡಿಗಳಿಗೆ ಪಂಚಾಯಿತಿಯಿಂದ ಅಧಿಕೃತ ಪರವಾನಗಿ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಖಾಸಗಿ ಜಾಗದ ಮಾಲೀಕರು ನಿಯಮಬಾಹಿರವಾಗಿ ಈ ಅಂಗಡಿಗಳಿಂದ ಪ್ರತಿ ತಿಂಗಳು ಸಾವಿರಾರು ರುಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ವಂತ ಲಾಭಕ್ಕಾಗಿ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ತಳ್ಳುತ್ತಿರುವ ಮಾಲೀಕರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಜೀವಕ್ಕೆ ಸಂಚಕಾರ:

ಅಂಗಡಿಗಳು ಖಾಸಗಿ ಜಾಗದಲ್ಲಿದ್ದರೂ, ಅವುಗಳ ಮಾಂಸದ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ.

ಇದರಿಂದ ಈ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಮಾಂಸದ ತುಂಡುಗಳಿಗಾಗಿ ನಾಯಿಗಳು ರಸ್ತೆಯ ಮಧ್ಯದಲ್ಲೇ ಕಿತ್ತಾಡುತ್ತಾ ಓಡಾಡುವುದರಿಂದ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಸಣ್ಣಪುಟ್ಟ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ.

ವಿಶೇಷವಾಗಿ ಆಸ್ಪತ್ರೆಗೆ ಬರುವ ರೋಗಿಗಳು, ವೃದ್ಧರು ಮತ್ತು ಶಾಲಾ ಮಕ್ಕಳು ನಾಯಿಗಳ ಭಯದಿಂದ ಓಡಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಕಣ್ಣಿದ್ದೂ ಕುರುಡಾದರೇ ಅಧಿಕಾರಿಗಳು?:

ವಿಪರ್ಯಾಸವೆಂದರೆ, ಚೇಳೂರು ತಹಸೀಲ್ದಾರರು ಇದೇ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲೇ ವಾಸಿಸುತ್ತಿದ್ದು, ಪ್ರತಿದಿನ ಇದೇ ರಸ್ತೆಯಲ್ಲೇ ಓಡಾಡುತ್ತಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳು ಸಹ ದಿನನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ, ಸಾರ್ವಜನಿಕರ ಈ ಗಂಭೀರ ಸಮಸ್ಯೆ ಕಂಡೂ ಕಾಣದಂತೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗ್ರಾಮ ಪಂಚಾಯಿತಿ ಕಚೇರಿಯು ಕೇವಲ 300 ಮೀಟರ್ ದೂರದಲ್ಲಿದ್ದರೂ, ಪಿಡಿಒ ಸೇರಿದಂತೆ ಯಾವುದೇ ಅಧಿಕಾರಿಗಳು ಈ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ.

ನೋಟಿಸ್ ನೀಡಲು ಹಿಂದೇಟು ಏಕೆ?:

ಜಾಗ ಖಾಸಗಿಯವರದ್ದಾದರೂ, ಅಲ್ಲಿನ ಕೃತ್ಯದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅಥವಾ ತ್ಯಾಜ್ಯ ವಿಲೇವಾರಿ ಸರಿಯಾಗಿಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿ ಅಂಗಡಿಗಳನ್ನು ಬಂದ್ ಮಾಡಿಸಲು ಕಾನೂನಿನಲ್ಲಿ ಅವಕಾಶವಿದೆ.

ಆದರೆ ಇದುವರೆಗೂ ಯಾವುದೇ ಒಬ್ಬ ಅಧಿಕಾರಿಯೂ ಅತ್ತ ಕಡೆ ಗಮನ ಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ''''ಮಾಮೂಲಿ'''' ವ್ಯವಹಾರದ ಸಂಶಯವನ್ನು ಬಲಪಡಿಸಿದೆ.

ಜಿಲ್ಲಾಧಿಕಾರಿಗಳ ಮಧ್ಯಪ್ರವೇಶಕ್ಕೆ ಆಗ್ರಹ:

ಸಾರ್ವಜನಿಕರ ಸುರಕ್ಷತೆ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಪರವಾನಗಿ ಇಲ್ಲದೆ, ಬಾಡಿಗೆ ಆಸೆಗೆ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಇಂತಹ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರ ಸಂಕಷ್ಟಕ್ಕೆ ಮುಕ್ತಿ ನೀಡಬೇಕೆಂದು ಚೇಳೂರು ನಾಗರಿಕರು ''''ಕನ್ನಡಪ್ರಭ'''' ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.

------

ಕೋಟ್.......

ಸರ್ಕಾರಿ ಆಸ್ಪತ್ರೆ ಮುಂಭಾಗದ ಮಾಂಸದ ಅಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಿಡಿಒ ಅವರಿಗೆ ಸೂಚನೆ ನೀಡುತ್ತೇನೆ.

- ಶ್ವೇತಾ ಬಿ.ಕೆ., ತಹಸೀಲ್ದಾರ್, ಚೇಳೂರು.

--

ಅಂಗಡಿಗಳು ಖಾಸಗಿ ಜಾಗದಲ್ಲಿದ್ದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಮಾಲೀಕರಿಗೆ ನೋಟಿಸ್ ನೀಡುವ ಮೂಲಕ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು.

- ಗೌಸ್ ಪೀರ್, ಪಿಡಿಒ, ಚೇಳೂರು.

---

ಆಸ್ಪತ್ರೆ ರಸ್ತೆಯಲ್ಲಿ ಮಾಂಸದ ತ್ಯಾಜ್ಯದಿಂದ ನಾಯಿಗಳ ಹಾವಳಿ ಹೆಚ್ಚಾಗಿ ಓಡಾಡಲು ಭಯವಾಗುತ್ತಿದೆ. ಖಾಸಗಿ ಜಾಗದ ಹೆಸರಲ್ಲಿ ಸಾರ್ವಜನಿಕರ ಆರೋಗ್ಯ ಕೆಡಿಸುತ್ತಿರುವುದು ಸರಿಯಲ್ಲ, ಕೂಡಲೇ ಕ್ರಮ ಕೈಗೊಳ್ಳಿ.

- ವೆಂಕಟೇಶ್, ಸ್ಥಳೀಯ ನಿವಾಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ