ಅನಧಿಕೃತ ಫ್ಲೆಕ್ಸ್‌, ಹೋರ್ಡಿಂಗ್ಸ್‌ ವಿರುದ್ಧ ಪಾಲಿಕೆ, ಡಿಸಿ ವಾರ್‌!

KannadaprabhaNewsNetwork |  
Published : Jan 18, 2025, 12:46 AM IST

ಸಾರಾಂಶ

ದಾವಣಗೆರೆ ನಗರ ವ್ಯಾಪ್ತಿಯ ಅನಧಿಕೃತ ಹೋರ್ಡಿಂಗ್ಸ್‌, ಫ್ಲೆಕ್ಸ್ ತೆರವಿಗೆ ಜಿಲ್ಲಾಧಿಕಾರಿ 15 ದಿನಗಳ ಗಡುವು ವಿಧಿಸಿದ ಬೆನ್ನಲ್ಲೇ ಪಾಲಿಕೆ ಅಧಿಕಾರಿ, ಸಿಬ್ಬಂದಿ ಶುಕ್ರವಾರ ಬೆಳಗ್ಗೆಯಿಂದಲೇ ಮೈಚಳಿ ಬಿಟ್ಟು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

- 15 ದಿನಗಳ ಗಡುವು ನೀಡಿದ್ದ ಡಿಸಿ । ಮೈಕೊಡವಿ ಎದ್ದ ಪಾಲಿಕೆ । ಕ್ರೇನ್‌, ಜೆಸಿಬಿ, ಟ್ರ್ಯಾಕ್ಟರ್ ಬಳಸಿ ತೆರವು ಕಾರ್ಯಾಚರಣೆ- ಪೊಲೀಸ್, ಬೆಸ್ಕಾಂ ಸಹಯೋಗದಲ್ಲಿ ಬೆಳ್ಳಂಬೆಳಗ್ಗೆಯೇ ಫೀಲ್ಡಿಗಿಳಿದ ಅಧಿಕಾರಿಗಳು । ಹೈಕೋರ್ಟ್‌ ಆದೇಶ ಹಿನ್ನೆಲೆ ಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರ ವ್ಯಾಪ್ತಿಯ ಅನಧಿಕೃತ ಹೋರ್ಡಿಂಗ್ಸ್‌, ಫ್ಲೆಕ್ಸ್ ತೆರವಿಗೆ ಜಿಲ್ಲಾಧಿಕಾರಿ 15 ದಿನಗಳ ಗಡುವು ವಿಧಿಸಿದ ಬೆನ್ನಲ್ಲೇ ಪಾಲಿಕೆ ಅಧಿಕಾರಿ, ಸಿಬ್ಬಂದಿ ಶುಕ್ರವಾರ ಬೆಳಗ್ಗೆಯಿಂದಲೇ ಮೈಚಳಿ ಬಿಟ್ಟು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ನಗರದ ಡಾ. ಎಂ.ಸಿ. ಮೋದಿ ವೃತ್ತ ಸೇರಿದಂತೆ ವಿವಿಧ ಕಡೆ ರೈಲ್ವೆ ಹಳಿಗಳ ಮಾದರಿಯ ಭಾರಿ ಗಾತ್ರದ ಕಬ್ಬಿಣದ ಸರಳುಗಳನ್ನು ನೆಲದಲ್ಲಿ ಹೂತು, ಎತ್ತರವಾಗಿ, ಅಗಲವಾಗಿ ಪ್ರಮುಖ ವೃತ್ತ, ರಸ್ತೆಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್‌, ಹೋರ್ಡಿಂಗ್ಸ್‌ಗಳನ್ನು ಕಟರ್‌, ಕ್ರೇನ್‌ಗಳು, ಜೆಸಿಬಿ ಯಂತ್ರ, ಟ್ರ್ಯಾಕ್ಟರ್‌ಗಳ ಸಹಾಯದಿಂದ ತೆರವುಗೊಳಿಸುವ ಕಾರ್ಯವನ್ನು ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.

ಮಹಾನಗರ ಪಾಲಿಕೆ, ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತಾರದೇ, ಅನುಮತಿಯನ್ನೂ ಪಡೆಯದೇ, ಯಾವುದೇ ಸುರಕ್ಷತಾ ಕ್ರಮಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ, ಹೋರ್ಡಿಂಗ್ಸ್‌, ಫ್ಲೆಕ್ಸ್‌ ಅಳ‍ಡಿಸಿದ್ದು, ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಪಾದಚಾರಿ ಮಾರ್ಗ, ಪಾರ್ಕ್‌ಗಳ ಸೌಂದರ್ಯಕ್ಕೂ ಇದರಿಂದ ಧಕ್ಕೆಯಾಗುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪಾಲಿಕೆಗೆ ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಾಲಿಕೆ ಫೀಲ್ಡಿಗೆ ಇಳಿಯಿತು. ಸುಮಾರು 20ಕ್ಕೂ ಹೆಚ್ಚು ಕಡೆ ಅನಧಿಕೃತ ಹೋರ್ಡಿಂಗ್ಸ್‌, ಫ್ಲೆಕ್ಸ್‌ಗಳನ್ನು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ತೆರವು ಮಾಡಿಸುತ್ತಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಪೊಲೀಸ್ ಭದ್ರತೆ, ಬೆಸ್ಕಾಂ ಇಲಾಖೆ, ಅರಣ್ಯ ಇಲಾಖೆಯ ಸಹಕಾರ ಪಡೆಯಲಾಗಿದೆ.

ಅನಧಿಕೃತ ಜಾಹೀರಾತು, ಫಲಕ ಅಳವಡಿಸಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪಾಲಿಕೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಕೈಗೊಂಡು, ಸಾರ್ವಜನಿಕರಿಗೆ ಮೂಲ ಸೌಕರ್ಯ, ರಸ್ತೆ, ಪಾದಚಾರಿ ಮಾರ್ಗ, ಗಿಡ ನೆಡುವುದು, ಎಸ್‌ಟಿಪಿ, ಬಸ್‌ ಸ್ಟ್ಯಾಂಡ್ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಅಚ್ಚುಕಟ್ಟಾಗಿ ಕೈಗೊಂಡು, ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿ, ಅನೇಕ ಪ್ರಶಸ್ತಿಯನ್ನೂ ದಾವಣಗೆರೆ ಗಳಿಸಿದೆ. ಆದರೆ, ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್‌ಗಳಿಂದಾಗಿ ನಗರ ಸೌಂದರ್ಯಕ್ಕೆ ಧಕ್ಕೆಯಾಗುವ ಜನರಿಗೂ ತೊಂದರೆ ಆಗುತ್ತಿತ್ತು. ಈ ಹಿನ್ನೆಲೆ ಪಾಲಿಕೆಗೆ ಜಿಲ್ಲಾಧಿಕಾರಿ ಚಾಟಿ ಬೀಸಿದ್ದರು.

ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತದಲ್ಲಿ ಅನಧಿಕೃತ ವ್ಯಕ್ತಿಗಳು ಪಾಲಿಕೆ, ದೂಡಾ ಗಮನಕ್ಕೆ ತಾರದೇ, ಹೋರ್ಡಿಂಗ್ಸ್, ಫ್ಲೆಕ್ಸ್ ಅಳವಡಿಸಿದ್ದರು. ಅಲ್ಲದೇ, ಯಾವುದೇ ಸುರಕ್ಷಿತ ಕ್ರಮಗಳನ್ನೂ ಕೈಗೊಂಡಿರಲಿಲ್ಲ. ಪಾದಚಾರಿ ಮಾರ್ಗ, ಪಾರ್ಕ್ ಸೌಂದರ್ಯಕ್ಕೂ ಧಕ್ಕೆ ತಂದಿದ್ದರು. ಅವನ್ನು ತೆರವುಗೊಳಿಸಿ, ಎಫ್ಐಆರ್ ದಾಖಲಿಸುವಂತೆ ಪಾಲಿಕೆ ‍‍ಆಯುಕ್ತರಿಗೆ ಜಿಲ್ಲಾಧಿಕಾರಿ ಲಿಖಿತ ಆದೇಶ ಹೊರಡಿಸಿ, ಅವುಗಳ ತೆರವಿಗೆ 15 ದಿನಗಳ ಗಡುವನ್ನು ನೀಡಿದ್ದರಿಂದ ಇಷ್ಟು ದಿನ ನಿದ್ದೆಗೆ ಜಾರಿದ್ದ ಆಯುಕ್ತರಾದಿಯಾಗಿ ಅಧಿಕಾರಿಗಳು ಈಗ ಎಚ್ಚೆತ್ತಂತೆ ಕಾಣುತ್ತಿದೆಯೆಂಬ ಮಾತುಗಳು ಸಹ ಜನರಿಂದ ಕೇಳಿಬರುತ್ತಿವೆ.

- - -

ಬಾಕ್ಸ್‌ * ಎಚ್ಚೆತ್ತು ಕೆಲಸ ಮಾಡಿ: ಪಾಲಿಕೆಗೆ ಡಿಸಿ ಚಾಟಿ ನ್ಯಾಯಾಲಯಗಳಲ್ಲಿ ಸಾರ್ವಜನಿಕ ರಸ್ತೆ, ಇತರೆ ಸ್ಥಳಗಳಲ್ಲಿ ಕರ್ನಾಟಕ ಡಿಸ್ಫಿಗರ್ಮೆಂಟ್ ಆಕ್ಟ್ ನಡಿ ಕಾನೂನುಬಾಹಿರವಾಗಿ ಯಾವುದೇ ಕಟ್ಟಡ ನಿರ್ಮಿಸುವುದು, ಅನಧಿಕೃತ ಕೆಲಸ ಮಾಡದಂತೆ ಆದೇಶ ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಸಂಬಂಧಿಸಿದಂತೆ ಹೋರ್ಡಿಂಗ್ಸ್, ಜಾಹೀರಾತು ಪ್ರಚುರಪಡಿಸುವ ಬಗ್ಗೆ ಮತ್ತು ಅಕ್ರಮ ಜಾಹೀರಾತು ನಿಯಂತ್ರಿಸಲು ಆದೇಶಿಸಿದೆ. ಲೋಕಾಯುಕ್ತರು, ಉಪ ಲೋಕಾಯುಕ್ತರು ಸಹ ಅನೇಕ ಸೂಚನೆ, ಆದೇಶಗಳನ್ನು ಸರ್ಕಾರ, ನಗರಾಭಿವೃದ್ಧಿ ಇಲಾಖೆಗೆ ನೀಡಿದೆ. ಕೆಲ ಪ್ರಕರಣ ವಿಚಾರಣೆ ಹಂತದಲ್ಲಿವೆ. ಈ ಸ್ಥಿತಿಯಲ್ಲಿ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಿ ಎಂದು ಡಿಸಿ ಸೂಚನೆ ನೀಡಿದ್ದರು.

ಸದ್ಯಕ್ಕೆ ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತ, ಶ್ರೀ ಶಾರದಾಂಬಾ ವೃತ್ತ, ಲಕ್ಷ್ಮೀ ಫ್ಲೋರ್ ಮಿಲ್, ಶಾಬನೂರು ರಸ್ತೆ, ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಅರಸು ಸರ್ಕಲ್, ಅಶೋಕ ಥಿಯೇಟರ್, ನರಸರಾಜ ರಸ್ತೆ, ಪಾಲಿಕೆ ಹತ್ತಿರ, ಕಿತ್ತೂರು ಚನ್ನಮ್ಮ ವೃತ್ತ ಇತರೆಡೆ ಯಾವುದೇ ಪರವಾನಿಗೆ ಮತ್ತು ಅನುಮತಿ ಪಡೆಯದೇ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್‌ ನಿರ್ಮಿಸಿದ್ದು, ಇವುಗಳಿಂದ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿರುವುದೂ ಗಂಭೀರ ಸಂಗತಿ ಎಂದು ಡಿಸಿ ಪಾಲಿಕೆಗೆ ಎಚ್ಚರಿಸಿದ್ದರು.

- - - ಬಾಕ್ಸ್‌- ಜಾಹೀರಾತು ಫಲಕ ಅಳವಡಿಸಲು ಅಲ್ಲಿದ್ದ ಮರಗಳನ್ನೇ ತೆರವುಗೊಳಿಸಿರುವುದು ಸಹ ಕಂಡು ಬಂದಿದೆ

- ಮರ ಕಡಿದವರ ವಿರುದ್ಧ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲು ಅರಣ್ಯ ಇಲಾಖೆಗೂ ಸೂಚನೆ - 15 ದಿನಗಳಲ್ಲೇ ಅನಧಿಕೃತ ಫ್ಲಕ್ಸ್ ಮತ್ತು ಹೋಲ್ಡಿಂಗ್ಸ್ ತೆರವು ಮಾಡಿ, ಚಿತ್ರ ಸಮೇತ ವರದಿಗೆ ಆದೇಶ

- ಅನಧಿಕೃತ ಜಾಹೀರಾತು ಫಲಕ ಅಳವಡಿಸಿದವರಿಂದ ದಂಡ ವಿಧಿಸಿ, ಅಷ್ಟೂ ಹಣ ವಸೂಲಿಗೆ ಕಟ್ಟಪ್ಪಣೆ

- ಜಾಹೀರಾತು ಫಲಕ ದಂಧೆಗೆ ಕೈ ಜೋಡಿಸಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ, ಇಲಾಖೆ ವಿಚಾರಣೆ

- - - - (ಫೋಟೋ ಬರಲಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿ ಬ್ಯಾನರ್ ಗಲಾಟೆ; ಪರಿಸ್ಥಿತಿ ಶಾಂತವಾಗಿಸಿದ ಸರ್ಕಾರದ ನಿರ್ಧಾರ
ಕಡೂರು ತಾಲೂಕು ಕಂದಾಯ ಇಲಾಖೆ ಪ್ರಗತಿ: ಸಿ.ಎಸ್.ಪೂರ್ಣಿಮಾ