ನವಲಿ ಬಳಿ ಅನಧಿಕೃತ ಮರಳು ಗಣಿಗಾರಿಕೆ-ಆಕ್ರೋಶ

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ಗಂಗಾವತಿ, ನವಲಿ ಸಮೀಪದ ನವಲಿ ಗ್ರಾಮ ಸೇರಿದಂತೆ ವಿವಿಧೆಡೆ ಅನಧಿಕೃತ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಗಾವತಿ/ನವಲಿ:

ಸಮೀಪದ ನವಲಿ ಗ್ರಾಮ ಸೇರಿದಂತೆ ವಿವಿಧೆಡೆ ಅನಧಿಕೃತ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಲೋಕಾಯುಕ್ತರಿಗೆ ಮನವಿ ಸಲ್ಲಿಸಿರುವ ಗ್ರಾಮಸ್ಥರು ನವಲಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಜಮೀನುಗಳಲ್ಲಿ ಹಲವರು ಮರಳು ದಂಧೆಯಲ್ಲಿ ತೊಡಗಿ ಗ್ರಾಮದ ಸುತ್ತಮುತ್ತಲಿನ ನೈಸರ್ಗಿಕ ಸಂಪತ್ತು ಹಾಳು ಮಾಡುತಿದ್ದಾರೆ. ಗಣಿ-ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ಲಕ್ಷಾಂತರ ಮೌಲ್ಯದ ಮರಳನ್ನು ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಹಿಂದೆ 40ರಿಂದ 50 ಟನ್ ಮರಳು ಸಾಗಾಟ ಮಾಡುತ್ತಿದ್ದವರ ವಿರುದ್ಧ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಟಾಸ್ಕ್ ಫೋರ್ಸ್ ಕಮಿಟಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ನವಲಿ, ಉದ್ದಿಹಾಳ ಪ್ರದೇಶಗಳಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆದಿದೆ ಎಂದು ತಿಳಿಸಿದ್ದಾರೆ. ಈ ಜಮೀನುಗಳ ಮಾಲೀಕರು ಕೃಷಿ ಮಾಡುವುದಾಗಿ ಹೇಳಿ ಮರಳು ದಂಧೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.ಮರಳಿನಲ್ಲಿ ಮೂವರು ಮೃತ: ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮರಲು ದಂಧೆ ಸಂದರ್ಭದಲ್ಲಿ ಮರಳು ಕುಸಿದು ಮೂವರು ಮೃತಪಟ್ಟಿದ್ದಾರೆ. ಹಿರೇಹಳ್ಳದಲ್ಲಿ ನೀರು ತುಂಬಲು ಹೋಗಿದ್ದಾಗ ಬಾಲಕಿ ಮರಳಿನಲ್ಲಿ ಸಿಲುಕಿ ಅವಘಡ ಸಂಭವಿಸಿವೆ. ಇಷ್ಟೆಲ್ಲ ಘಟನೆ ನಡೆದರೂ ಜಿಲ್ಲಾಡಳಿತ, ಪೊಲೀಸ್, ಗಣಿ-ಭೂವಿಜ್ಞಾನ ಇಲಾಖೆಯವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ನಿಂಗಪ್ಪನಾಯಕ, ಜಡಿಯು ಮುಕ್ಕುಂದಿ, ವೀರೇಶ ಸಾಲವಂಶಿ, ಹನುಮಂತಪ್ಪ ಕಾರಾಟಗಿ, ದುರಗಪ್ಪ ಭಜಂತ್ರಿ, ಲಿಂಗರಾಜ್ ಹೂಗಾರ, ಪಂಚಯ್ಯಸ್ವಾಮಿ ಬಿದನೂರು ಮಠ, ಭೋಗಪ್ಪ ಸಂಕನಾಳ ರಮೇಶ ಕಂಬಳಿ ಸೇರಿದಂತೆ ಗ್ರಾಮಸ್ಥರು ತಿಳಿಸಿದ್ದಾರೆ.ಪಾದಯಾತ್ರೆ ಎಚ್ಚರಿಕೆ: ನವಲಿ, ಉದ್ದಿಹಾಳ ಸೇರಿದಂತೆ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಇದನ್ನು ನಿಯಂತ್ರಿಸದಿದ್ದರೆ ಶೀಘ್ರದಲ್ಲೇ ನವಲಿಯಿಂದ ಕನಕಗರಿ ತಹಸೀಲ್ದಾರ್‌ ಕಚೇರಿಗೆ ಗ್ರಾಮಸ್ಥರು ಪಾದಯಾತ್ರೆ ಮೂಲಕ ಧರಣಿ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Share this article