ಕಸ ಸಂಗ್ರಹದ ಗೂಡಂತಾದ ಚರಂಡಿಗಳಿಗೆ ಮುಕ್ತಿ ನೀಡಿ

KannadaprabhaNewsNetwork | Published : May 6, 2024 12:34 AM

ಸಾರಾಂಶ

ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಪಟ್ಟಣದಲ್ಲಿ ಯಾವುದೇ ಚರಂಡಿಗಳು ಕಸ ಮುಕ್ತವಾಗಿಲ್ಲ. ಪುರಸಭೆ ಸಹ ಚರಂಡಿಗಳ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಜೋರು ಮಳೆ ಬಂದಾಗ ಮಾತ್ರ ಚರಂಡಿಗಳ ಅವ್ಯವಸ್ಥೆ ಬಗ್ಗೆ ಪುರಸಭೆ ಗಮನ ಹರಿಸುತ್ತದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದಲ್ಲಿ ಕಸ ಸಂಗ್ರಹಿಸಲು ನಿತ್ಯ ಮನೆಗಳ ಬಳಿ ಕಸದ ವಾಹನ ಬಂದರೂ ವಾಹನಕ್ಕೆ ಕಸ ಹಾಕದೆ ರಸ್ತೆ, ಚರಂಡಿಗಳಲ್ಲಿ ಎಸೆಯುತ್ತಿರುವುದರಿಂದ ಚರಂಡಿಗಳು ಸಂಗ್ರಹಿಸುವ ಗೂಡಾಗಿ ಪರಿವರ್ತನೆಯಾಗಿದ್ದರೂ ಪುರಸಭೆ ಜಾಣಕುರುಡು ಪ್ರದರ್ಶಿಸುತ್ತಿದೆ.

ಪಟ್ಟಣದಲ್ಲಿರುವ ಎಲ್ಲಾ ಬಡಾವಣೆಗಳ ಚರಂಡಿಗಳು ಕೊಳಚೆ ನೀರು ಹಾಗೂ ಮಳೆ ನೀರು ಸರಾಗವಾಗಿ ಹರಿಯಲಿ ಎಂದು ನಿರ್ಮಾಣ ಮಾಡಲಾಗಿದೆ, ಆದರೆ ಈಗ ಚರಂಡಿಗಳು ಕೊಳಚೆ ನೀರು ಹಾಗೂ ಮಳೆ ನೀರು ಹರಿಯುವ ಬದಲು ತ್ಯಾಜ್ಯಗಳ ಸಂಗ್ರಹ ಕೇಂದ್ರವಾಗಿದೆ. ಕಸದ ಗೂಡಾದ ಚರಂಡಿಗಳು

ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಪಟ್ಟಣದಲ್ಲಿ ಯಾವುದೇ ಚರಂಡಿಗಳು ಕಸ ಮುಕ್ತವಾಗಿಲ್ಲ. ಪುರಸಭೆ ಸಹ ಚರಂಡಿಗಳ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಜೋರು ಮಳೆ ಬಂದಾಗ ಮಾತ್ರ ಚರಂಡಿಗಳ ಅವ್ಯವಸ್ಥೆ ಬಗ್ಗೆ ಪುರಸಭೆ ಗಮನ ಹರಿಸುತ್ತದೆ. ಇತ್ತೀಚೆಗೆ ಪಟ್ಟಣದಲ್ಲಿ ಭರ್ಜರಿ ಮಳೆಯಾದಾಗ ಮಳೆ ನೀರು ಚರಂಡಿಗಳಲ್ಲಿ ಹರಿಯಲು ಸ್ಥಳಾವಕಾಶ ಇಲ್ಲದೆ ಕೊಳಚೆ ನೀರಿನ ಜೊತೆ ರಸ್ತೆಗಳ ಮೇಲೆ ಹರಿಯಿತು.

ಇದರಿಂದಾಗಿ ರಸ್ತೆಯಲ್ಲಿ ಸಂಚರಿಸದಂತಹ ಪರಿಸ್ಥಿತಿ ಉಂಟಾಗಿತ್ತು. ಕೆಲವು ಕಡೆ ಮೋರಿಯ ಕೊಳಚೆ ನೀರು ಮನೆಗಳ ಒಳಗೆ ನುಗ್ಗಿದೆ. ಮಳೆ ನೀರು ಹರಿಯಲೆಂದು ನಿರ್ಮಾಣ ಮಾಡಿರುವ ರಾಜಕಾಲುವೆಗಳೂ ಸಹ ಒತ್ತುವರಿದಾರರ ಒತ್ತುವರಿಗೆ ತುತ್ತಾಗಿ ದಿನೇದಿನೆ ಮಾಯವಾಗುತ್ತಿದೆ. ಆದರೂ ತಾಲೂಕು ಆಡಳಿತವಾಗಲಿ ಇಲ್ಲವೆ ಪುರಸಭೆಯಾಗಲಿ ಗಮನಹರಿಸಿ ಒತ್ತುವರಿಯನ್ನು ತೆರವುಗೊಳಿಸುವ ಗೋಜಿ ಹೋಗುತ್ತಿಲ್ಲ.

ಅವೈಜ್ಞಾನಿಕವಾಗಿ ಚರಂಡಿ

ಪಟ್ಟಣದ ಎಸ್‌ಎನ್ ರೆಸಾರ್ಟ್‌ನಿಂದ ದೇಶಿಹಳ್ಳಿವರೆಗೂ ನಿರ್ಮಾಣ ಮಾಡಿರುವ ಡಬಲ್ ರಸ್ತೆಯ ಎರಡೂ ಬದಿಗಳಲ್ಲಿರುವ ಒಳಚರಂಡಿ ಸಹ ಅವ್ಯವಸ್ಥೆಯಲ್ಲಿ ಕೂಡಿದೆ, ಮಳೆ ನೀರು ಯಾವ ಕಡೆಯಿಂದಲೂ ಒಳಚರಂಡಿಯೊಳಗೆ ಹರಿಯಲು ಅವಕಾಶ ನೀಡಿಲ್ಲದ ಅಷ್ಟೊಂದು ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ.

ಮಳೆ ಬಂದರೆ ರಸ್ತೆಗಳು ತುಂಬು ನೀರಿನಿಂದ ಆವರಿಸಿ ವಾಹನಗಳ ಸಂಚಾರಕ್ಕೆ ಸಂಚಕಾರ ತರುತ್ತದೆ, ಮತ್ತೊಂದು ಕಡೆ ರಸ್ತೆಗಳು ಬೇಗನೆ ಹಾಳಾಗುವಂತಾಗಿದೆ.ಇಲ್ಲಿಯೂ ಸಹ ಎರಡೂ ಕಡೆ ಚರಂಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳು,ಬೀಯರ್ ಬಾಟಲಿಗಳು ಹಾಗೂ ಇತರೇ ಕಸ ಕಡ್ಡಿಗಳು ತುಂಬಿಕೊಂಡು ನೀರು ಹರಿಯಲು ಸಾಧ್ಯವಿಲ್ಲದಂತಾಗಿದೆ.

ಆಡಳಿತಾಧಿಕಾರಿ ನಿರ್ಲಕ್ಷ್ಯ

ಪುರಸಭೆ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ವರ್ಷದಿಂದ ಪುರಸಭೆ ವ್ಯಾಪ್ತಿಯಲ್ಲಿ ಸದಸ್ಯರ ಸಮಸ್ಯೆಗಳಿಗೇ ಬೆಲೆ ಇಲ್ಲದಂತಾಗಿದೆ.ಇನ್ನು ನಾಗರೀಕರ ಸಮಸ್ಯೆಗಳನ್ನು ಯಾರು ಕೇಳುವವರೇ ಇಲ್ಲ. ಪುರಸಭೆ ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ಇದ್ದಾರೆ, ಅವರು ಪುರಸಭೆ ಕಡೆ ಮುಖ ಮಾಡಲ್ಲ, ಇನ್ನು ಮುಖ್ಯಾಧಿಕಾರಿ ಇದ್ದರೂ ಇಲ್ಲದಂತಾಗಿದೆ.

Share this article