ಬಾರದ ಪಠ್ಯ ಪುಸ್ತಕ, ವಿದ್ಯಾರ್ಥಿಗಳ ಪಾಠಕ್ಕೆ ಸಂಕಟ

KannadaprabhaNewsNetwork | Published : Jun 12, 2024 12:39 AM

ಸಾರಾಂಶ

ಪ್ರಾಥಮಿಕ ಶಾಲೆಗಳಿಗೆ ಶೇ. 50ರಷ್ಟು ಹಾಗೂ ಪ್ರೌಢಶಾಲೆಗಳಿಗೆ ಶೇ. 70ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿಲ್ಲ.

ಅಶೋಕ ಡಿ. ಸೊರಟೂರ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪ್ರಸಕ್ತ ವರ್ಷದ ಶೈಕ್ಷಣಿಕ ಅವಧಿ ಪ್ರಾರಂಭವಾಗಿ 15 ದಿನಗಳು ಕಳೆಯುತ್ತ ಬಂದಿದ್ದರೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪೂರ್ಣ ಪ್ರಮಾಣದ ಪಠ್ಯ ಪುಸ್ತಕಗಳು ಬಾರದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆ ಉಂಟಾಗಿದೆ.

ಸರ್ಕಾರ ಶೈಕ್ಷಣಿಕ ಅವಧಿಯ ಆರಂಭದಲ್ಲಿಯೇ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪೂರೈಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು, ಆದರೆ, ಪ್ರಾಥಮಿಕ ಶಾಲೆಗಳಿಗೆ ಶೇ. 50ರಷ್ಟು ಹಾಗೂ ಪ್ರೌಢಶಾಲೆಗಳಿಗೆ ಶೇ. 70ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿಲ್ಲ ಎಂಬುದು ಶಾಲೆಗಳಲ್ಲಿ ಹೋಗಿ ನೋಡಿದಾಗ ತಿಳಿದು ಬರುತ್ತದೆ.

ತಾಲೂಕಿನ ಉರ್ದು ಶಾಲೆಗಳಿಗೆ ಯಾವುದೇ ಪಠ್ಯ ಪುಸ್ತಕಗಳು ಬಾರದಿರುವುದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳ 1, 2 ಮತ್ತು 3ನೇ ತರಗತಿ ಹಾಗೂ 4, 5, 6 ಮತ್ತು 7ನೇ ತರಗತಿಯ ಪಠ್ಯ ಪುಸ್ತಕಗಳು ಬಾರದಿರುವ ಹಿನ್ನೆಲೆಯಲ್ಲಿ ಪಾಠ ಪ್ರವಚನಕ್ಕೆ ಹಿನ್ನಡೆಯಾಗಿದೆ ಎಂಬುದು ಪಾಲಕರ ಅಳಲಾಗಿದೆ. ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೇ. 50ರಷ್ಟು ಪಠ್ಯಪುಸ್ತಕಗಳು ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಸುಮ್ಮನೆ ಶಾಲೆಗೆ ಹೋಗಿ ಬರುವ ಕಾರ್ಯ ಮಾಡುವಂತಾಗಿದೆ. ಸರ್ಕಾರ ಶೀಘ್ರದಲ್ಲಿ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸುವ ಮೂಲಕ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಆಗುವ ತೊಂದರೆ ತಪ್ಪಿಸಬೇಕು ಎಂದು ನಿವೃತ್ತ ಶಿಕ್ಷಕ ಸಿ.ಜಿ. ಹಿರೇಮಠ ಹೇಳಿದ್ದಾರೆ. ತೊಂದರೆ

ನಮ್ಮ ಮಕ್ಕಳು ಪಟ್ಟಣದ ಶಾಲೆಗಿ ಹೋಗುತ್ತಿದ್ದಾರೆ. ಶಾಲೆಯಲ್ಲಿ ಇದುವರೆಗೂ ಪಠ್ಯ ಪುಸ್ತಕಗಳು ಬಂದಿಲ್ಲವೆಂದು ಮುಖ್ಯೋಪಾಧ್ಯಾಯರು ಹೇಳುತ್ತಿದ್ದಾರೆ. ಹೀಗಾಗಿ ಮಕ್ಕಳ ಅಭ್ಯಾಸಕ್ಕೆ ಸಾಕಷ್ಟು ತೊಂದರೆಯಾಗುತ್ತದೆ, ಶಿಕ್ಷಣ ಇಲಾಖೆ ಇದುವರೆಗೂ ಪಠ್ಯ ಪುಸ್ತಕ ನೀಡಿಲ್ಲ, ಆದ್ದರಿಂದ ಶೀಘ್ರದಲ್ಲಿ ಪುಸ್ತಕ ನಿಡುವ ಮೂಲಕ ಮಕ್ಕಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು.

ಪ್ರವೀಣ ಮಾತಾಡೆ ಲಕ್ಷ್ಮೇಶ್ವರ ಪಾಲಕರುಸದ್ಯದಲ್ಲೇ ವಿತರಣೆ

ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಶೇ. 60ರಷ್ಟು ಪುಸ್ತಕಗಳು ಬಂದಿವೆ. ಇನ್ನುಳಿದ ಪಠ್ಯ ಪುಸ್ತಕಗಳು ಸಧ್ಯದಲ್ಲಿಯೇ ಬರುತ್ತವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದು ಸಧ್ಯದಲ್ಲಿಯೇ ಉಳಿದ ಪಠ್ಯ ಪುಸ್ತಕ ಬಂದ ತಕ್ಷಣ ಹಂಚುವ ಕಾರ್ಯ ಮಾಡುತ್ತೇವೆ.

ಎಚ್.ಎನ್. ನಾಯ್ಕ ಬಿಇಒ

Share this article