ನರೇಗಾ ಯೋಜನೆಯಡಿ ಗ್ರಾಮದಲ್ಲೇ ಕೂಲಿ ಕಾರ್ಮಿಕರು ಕೆಲಸ ಮಾಡಿ-ದೊಡ್ಡಮನಿ

KannadaprabhaNewsNetwork | Published : Apr 24, 2025 11:46 PM

ಸಾರಾಂಶ

ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗಬಾರದು. ನಿಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿಯೇ ನಿರಂತರ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಕರೆ ನೀಡಿದರು.

ಶಿರಹಟ್ಟಿ: ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗಬಾರದು. ನಿಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿಯೇ ನಿರಂತರ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಕರೆ ನೀಡಿದರು. ತಾಲೂಕಿನ ಕೋಗನೂರ ಗ್ರಾ.ಪಂ. ವ್ಯಾಪ್ತಿಯ ಗೋವನಕೊಪ್ಪ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಪಂಚಾಯಿತಿ ವ್ತಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ನರೇಗಾ ಅಡಿಯಲ್ಲಿ ಕೆಲಸ ಮಾಡಲು ಅನೇಕ ಅವಕಾಶಗಳಿವೆ ಎಂದರು.ತಾಲೂಕಿನಲ್ಲಿ ರೈತಾಪಿ ವರ್ಗ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ನಿರಂತರ ಕೆಲಸ ನೀಡಲು ಮುಂದಾಗಿದ್ದು, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ವೈಯಕ್ತಿಕ ಅಥವಾ ಸಾಮೂಹಿಕ ಕೆಲಸಗಳಲ್ಲಿ ಭಾಗಿಯಾಗಿ ಉದ್ಯೋಗ ಪಡೆದುಕೊಂಡು ಆರ್ಥಿಕವಾಗಿ ಸಶಕ್ತರಾಗಬೇಕು ಎಂದು ಕರೆ ತಿಳಿಸಿದರು. ಕೂಲಿಕಾರರು ಗ್ರಾಮ ಪಂಚಾಯಿತಿಗೆ ನಮೂನೆ ೬ರಲ್ಲಿ ಕೆಲಸದ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯಬೇಕು. ಉದ್ಯೋಗ ಖಾತರಿ ಯೋಜನೆಯಡಿ ನೋಂದಾಯಿತ ಕುಟುಂಬಕ್ಕೆ ವರ್ಷಕ್ಕೆ ೧೦೦ ಮಾನವ ದಿನಗಳ ಕೆಲಸ ಮಾಡಲು ಅವಕಾಶವಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನರೇಗಾ ಯೋಜನೆ ಅಡಿಯಲ್ಲಿ ಅನುದಾನ ಲಭ್ಯವಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅರಸಿ ಬರುವಂತವರಿಗೆ ತಕ್ಷಣ ಉದ್ಯೋಗ ಕಲ್ಪಿಸಿಕೊಡಬೇಕೆಂದು ತಾಲೂಕಿನ ಎಲ್ಲ ಪಿಡಿಓಗಳ ಸಭೆ ಕರೆದು ಸೂಕ್ತ ನಿರ್ದೇಶನವನ್ನು ನೀಡಲಾಗಿದೆ. ಯಾರಿಗಾದರೂ ಉದ್ಯೋಗ ನೀಡುವಲ್ಲಿ ವಿಳಂಬ ಮಾಡಿದಲ್ಲಿ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.ಜಾಬ್ ಕಾರ್ಡ್ ಇಲ್ಲದೆ ಇರುವ ಕೂಲಿ ಕಾರ್ಮಿಕರು ತಕ್ಷಣವೇ ದಾಖಲಾತಿಗಳನ್ನು ನೀಡಿ ಹೊಸ ಜಾಬ್ ಕಾರ್ಡ್‌ಗ ಳನ್ನು ಪಡೆದುಕೊಂಡು ಯೋಜನೆಯ ಲಾಭವನ್ನು ಪಡೆಯಿರಿ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗಿರುವುದರಿಂದ ಫಲಾನುಭವಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ನಮ್ಮ ದೇಹದ ಆರೋಗ್ಯವು ಬಹು ಮುಖ್ಯವಾಗಿದ್ದು ಹೆಚ್ಚು ನೀರು ಕುಡಿಯಿರಿ. ನೀರನ್ನು ಕುದಿಸಿ ಆರಿಸಿ ಕುಡಿಯಿರಿ ಎಂದು ಸಲಹೆ ನೀಡಿದರು. ಕೂಲಿಕಾರರು ಅಳತೆಗೆ ಅನುಸಾರವಾಗಿ ಕೂಲಿ ಪಾವತಿಯಾಗುತ್ತದೆ. ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಪ್ರತಿ ದಿನ ಎನ್‌ಎಂಎA ೨ ಬಾರಿ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಕೂಲಿಕಾರರು ಎರಡು ಹಾಜರಾತಿಯನ್ನು ಕಡ್ಡಾಯವಾಗಿ ಪಾಲ್ಗೊಂಡು ಹಾಜರಾತಿ ಹಾಕಿಸಬೇಕು. ಒಂದು ವೇಳೆ ಬೆಳಗಿನ ಹಾಜರಾತಿ ಹಾಕಿಸಿ ಮಧ್ಯಾಹ್ನದ ಹಾಜರಾತಿ ಹಾಕಿಸದಿದ್ದರೆ ತಮಗೆ ಆ ದಿನದ ಕೂಲಿ ಪಾವತಿಯಾಗುವುದಿಲ್ಲ ಎಂದು ತಿಳಿಸಿದರು. ಕೆಲಸ ಪ್ರಾರಂಭವಾಗಿದೆ ಎಂದು ಎನ್.ಎಂ.ಆರ್. ನಲ್ಲಿ ಹೆಸರು ಇಲ್ಲದೆ ಯಾವ ಕೂಲಿಕಾರರು ಕೆಲಸಕ್ಕೆ ಬರುವಂತಿಲ್ಲ. ಒಂದು ವೇಳೆ ಬಂದ ಸಂದರ್ಭದಲ್ಲಿ ಅವರಿಗೆ ಕೂಲಿ ಹಣ ಪಾವತಿಯಾಗುವುದಿಲ್ಲ. ಹಾಗಾಗಿ ಕೂಲಿಕಾರರು ಎನ್.ಎಂ.ಆರ್. ಹಾಕಿಸಿ ಕೆಲಸಕ್ಕೆ ಬರುವಂತೆ ಕೂಲಿಕಾರರಿಗೆ ಸೂಚಿಸಿದರು.ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಇಲ್ಲದ ಕಾರಣ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ಮತ್ತು ಕೂಲಿಕಾರರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪಿಡಿಒ, ನರೇಗಾ ಸಿಬ್ಬಂದಿ, ಗ್ರಾ.ಪಂ. ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಹಾಜರಿದ್ದರು.

Share this article